ADVERTISEMENT

ಮ್ಯಾನ್ಮಾರ್‌: ಸೂ ಕಿಗೆ ಮತ್ತೆ ಗೃಹಬಂಧನ

ಏಜೆನ್ಸೀಸ್
Published 3 ಫೆಬ್ರುವರಿ 2021, 5:50 IST
Last Updated 3 ಫೆಬ್ರುವರಿ 2021, 5:50 IST
ಆಂಗ್‌ ಸಾನ್‌ ಸೂ ಕಿ
ಆಂಗ್‌ ಸಾನ್‌ ಸೂ ಕಿ   

ಬ್ಯಾಂಕಾಕ್‌: ಕ್ಷಿಪ್ರ ದಂಗೆ ಎದ್ದು, ದೇಶದ ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಸಫಲವಾಗಿರುವ ಮ್ಯಾನ್ಮಾರ್‌ ಸೇನೆ, ಹೋರಾಟಗಾರ್ತಿ ಆಂಗ್‌ ಸಾನ್‌ ಸೂ ಕಿ ಅವರನ್ನು ಪುನಃ ಗೃಹ ಬಂಧನದಲ್ಲಿರಿಸಿದೆ.

ಪ್ರಜಾಪ್ರಭುತ್ವ ಸ್ಥಾಪನೆಗಾಗಿ ದಶಕಗಳ ಹಿಂದೆ ಹೋರಾಟ ಆರಂಭಿಸಿದ್ದ ಸೂ ಕಿ ಅವರನ್ನು ಆಗಲೂ ಗೃಹಬಂಧನದಲ್ಲಿರಿಸಲಾಗಿತ್ತು. ಈಗ ಅವರಿಗೆ ಮತ್ತೆ ಅದೇ ಸ್ಥಿತಿ ಬಂದೊದಗಿದೆ.

ವ್ಯತ್ಯಾಸವೆಂದರೆ, ದಶಕಗಳ ಹಿಂದೆ ಅವರ ಹೋರಾಟಕ್ಕೆ ಅಂತರರಾಷ್ಟ್ರೀಯ ಸಮುದಾಯ ಬೆಂಬಲ ಸೂಚಿಸಿತ್ತು. ಅವರಿಗೆ ಗೃಹಬಂಧನ ವಿಧಿಸಿದಾಗ ಒಕ್ಕೊರಲ ಖಂಡನೆ ವ್ಯಕ್ತವಾಗಿತ್ತು. ಆದರೆ, ಈಗ ಸೂ ಕಿ ಅವರಿಗೆ ಇಂಥ ಬೆಂಬಲ ವ್ಯಕ್ತವಾಗುತ್ತಿಲ್ಲ.

ADVERTISEMENT

ಅವರ ಬಂಧನವನ್ನು ಅನೇಕ ರಾಷ್ಟ್ರಗಳ ಮುಖಂಡರು ಖಂಡಿಸಿದ್ದಾರೆ. ಅವರ ಬಿಡುಗಡೆಗೆ ಆಗ್ರಹಿಸಿ ಹೇಳಿಕೆ ನೀಡಿ ಸುಮ್ಮನಾಗಿದ್ದಾರೆ. ಅವರನ್ನು ಪ್ರಜಾಪ್ರಭುತ್ವ ಪರ ಹೋರಾಟ ಮುನ್ನಡೆಸುವ ಆದರ್ಶ ವ್ಯಕ್ತಿಯನ್ನಾಗಿ ಪರಿಗಣಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಸಿದ್ಧ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

‘ಮಾನ್ಮಾರ್‌ನಲ್ಲಿ ಮಿಲಿಟರಿ ನಡೆಸಿದ ದೌರ್ಜನ್ಯ ಎಲ್ಲರಿಗೂ ಗೊತ್ತು. ಮಿಲಿಟರಿ ನಡೆಸಿದ ಇಂಥ ಅನೇಕ ಕೃತ್ಯಗಳಲ್ಲಿ ಸೂ ಕಿ ಶಾಮೀಲಾಗಿದ್ದರು. ಈಗ ಅವರಿಗೆಅದೇ ತಿರುಗುಬಾಣವಾಗಿ ಪರಿಣಮಿಸಿದೆ’ ಎಂದು ಅಮೆರಿಕದ ಹಿರಿಯ ರಾಜತಾಂತ್ರಿಕ ಬಿಲ್‌ ರಿಚರ್ಡ್‌ಸನ್‌ ಹೇಳುತ್ತಾರೆ.

‘ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ವಿಷಯದಲ್ಲಿ ಸೂ ಕಿ ಅವರಿಗೆ ಅಂಥ ಭವಿಷ್ಯ ಇಲ್ಲ ಎಂಬುದು ನನ್ನ ಭಾವನೆ. ಮಿಲಿಟರಿ ಈಗ ಆಕೆಯನ್ನು ನಂಬುತ್ತಿಲ್ಲ. ಮತ್ತೆ ಆಕೆ ಆಡಳಿತದ ಭಾಗವಾಗುವುದು ಮಿಲಿಟರಿಗೆ ಬೇಕಾಗಿಯೂ ಇಲ್ಲ’ ಎಂದು ಮತ್ತೊಬ್ಬ ರಾಜಕೀಯ ವಿಶ್ಲೇಷಕ ಲ್ಯಾರಿ ಜಾಗನ್‌ ಅಭಿಪ್ರಾಯಪಡುತ್ತಾರೆ.

ಮ್ಯಾನ್ಮಾರ್‌ನ ರಾಜಕೀಯ ಇತಿಹಾಸದ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ರಾಬರ್ಟ್‌ ಟೇಲರ್‌, ಈ ವಿಶ್ಲೇಷಣೆಗಳನ್ನು ಒಪ್ಪುವುದಿಲ್ಲ.

‘ಸೂ ಕಿ ಅವರನ್ನು ರಾಜಕೀಯವಾಗಿ ತುಳಿಯುವ ಯತ್ನ ನಡೆಯುವುದು. ಆದರೆ, ಅವರಿಗೆ ಜನ ಬೆಂಬಲ ಸಿಗಲಿದೆ. ಅವರೇ ಮುಂಚೂಣಿ ನಾಯಕಿಯಾಗುವರು’ ಎಂದು ಟೇಲರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.