ADVERTISEMENT

ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಏಜೆನ್ಸೀಸ್
Published 5 ಜೂನ್ 2022, 1:43 IST
Last Updated 5 ಜೂನ್ 2022, 1:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಸೋಲ್‌: ಶಸ್ತ್ರಾಸ್ತ್ರ ಪರೀಕ್ಷೆಯನ್ನು ಮುಂದುವರಿಸಿರುವ ಉತ್ತರ ಕೊರಿಯಾ ಭಾನುವಾರ ಹೊಸದೊಂದು ಕ್ಷಿಪಣಿಯನ್ನು ಉಡಾಯಿಸಿರುವುದಾಗಿ ದಕ್ಷಿಣ ಕೊರಿಯಾದ ಸೇನೆ ಹೇಳಿದೆ.

‘ಉತ್ತರ ಕೊರಿಯಾ ಅಪರಿಚಿತ ಕ್ಷಿಪಣಿಯೊಂದನ್ನು ಪೂರ್ವ ಸಮುದ್ರದತ್ತ ಹಾರಿಸಿದೆ‘ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು, ಜಪಾನ್‌ನ ಮಾಹಿತಿ ಉಲ್ಲೇಖಿಸಿ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿರುವ ಹೊರತಾಗಿಯೂ ಉತ್ತರ ಕೊರಿಯಾ ಈ ವರ್ಷ ತನ್ನ ಶಸ್ತ್ರಾಸ್ತ್ರ ನವೀಕರಣ ಯೋಜನೆಗಳನ್ನು ದ್ವಿಗುಣಗೊಳಿಸಿದೆ. ತನ್ನ ಏಳನೇ ಪರಮಾಣು ಕ್ಷಿಪಣಿ ಪರೀಕ್ಷೆಯನ್ನು ಉತ್ತರ ಕೊರಿಯಾ ಇಷ್ಟರಲ್ಲೇ ನಡೆಸಲಿದೆ ಎಂದು ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಅಧಿಕಾರಿಗಳು ಒಂದು ವಾರದಿಂದಲೂ ಹೇಳುತ್ತಲೇ ಬಂದಿದ್ದರು. ಅದರಂತೆ, ಇಂದು ಕ್ಷಿಪಣಿ ಪ್ರಯೋಗ ನಡೆದಿದೆ.

ADVERTISEMENT

ಕಳೆದ ತಿಂಗಳು, ಮೂರು ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷಿಸಿತ್ತು. ಹ್ವಾಸಾಂಗ್ -17 ಹೆಸರಿನ ಅತಿದೊಡ್ಡ ಖಂಡಾಂತರ ಕ್ಷಿಪಣಿಯೂ ಇದರಲ್ಲಿತ್ತು ಎಂದು ನಂಬಲಾಗಿದೆ.

ಇತ್ತೀಚಿನ ಕೋವಿಡ್ -19 ಹೊಡೆತದ ಹೊರತಾಗಿಯೂ, ಉತ್ತರ ಕೊರಿಯಾ ಬಾಕಿ ಉಳಿದಿರುವ ತನ್ನ ಪರಮಾಣು ರಿಯಾಕ್ಟರ್‌ನ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.