ADVERTISEMENT

ಅಸ್ಥಿರತೆ ನಡುವೆ ಭಾರತಕ್ಕೆ ಭೇಟಿ ನೀಡಲು ಬಾಂಗ್ಲಾ ಪ್ರಧಾನಿಗೆ ಮೋದಿ ಆಹ್ವಾನ

ಪಿಟಿಐ
Published 18 ಫೆಬ್ರುವರಿ 2026, 3:12 IST
Last Updated 18 ಫೆಬ್ರುವರಿ 2026, 3:12 IST
<div class="paragraphs"><p>ನರೇಂದ್ರ ಮೋದಿ, ತಾರಿಕ್ ರೆಹಮಾನ್</p></div>

ನರೇಂದ್ರ ಮೋದಿ, ತಾರಿಕ್ ರೆಹಮಾನ್

   

(ಪಿಟಿಐ ಚಿತ್ರ)

ನವದೆಹಲಿ: ರಾಜಕೀಯ ಅಸ್ಥಿರತೆಯ ನಡುವೆ ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ಭಾರತಕ್ಕೆ ಭೇಟಿ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.

ADVERTISEMENT

ತಾರಿಕ್ ರೆಹಮಾನ್ ಅವರಿಗೆ ಕುಟುಂಬ ಸಮೇತ ಭಾರತಕ್ಕೆ ಆಗಮಿಸಲು ಆಹ್ವಾನ ನೀಡಿರುವ ಪ್ರಧಾನಿ ಮೋದಿ, ದ್ವಿಪಕ್ಷೀಯ ಬಾಂಧವ್ಯವನ್ನು ಗಟ್ಟಿಗೊಳಿಸಲು ಬಾಂಗ್ಲಾದೇಶದ ನ್ಯಾಷನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ಪಕ್ಷದ ನಾಯಕರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾರತದ ಪ್ರತಿನಿಧಿಯಾಗಿ ಸ್ಪೀಕರ್ ಓಂ ಬಿರ್ಲಾ ಅವರು ಭಾಗವಹಿಸಿದ್ದರು. ಪ್ರಧಾನಿ ಮೋದಿ ಅವರ ಪತ್ರವನ್ನು ಬಿರ್ಲಾ ಹಸ್ತಾಂತರಿಸಿದರು.

ಎರಡೂ ದೇಶಗಳ ಸಹಭಾಗಿತ್ವ ಗಟ್ಟಿ ಮಾಡಿಕೊಳ್ಳುವ ನಿಲುವನ್ನು ಪುನರುಚ್ಚರಿಸಲಾಯಿತು. ನೆರೆಹೊರೆಯ ರಾಷ್ಟ್ರಗಳಾಗಿ ಅನೋನ್ಯ ಇತಿಹಾಸ, ಸಾಂಸ್ಕೃತಿಕ ಹಾಗೂ ಆಕಾಂಕ್ಷೆಗಳ ಸ್ನೇಹ ಬಾಂಧವ್ಯವನ್ನು ಹೊಂದಿವೆ. ಅಭಿವೃದ್ಧಿಯ ಆದ್ಯತೆಯು ಭವಿಷ್ಯದ ಸಹಕಾರಕ್ಕೆ ಮಾರ್ಗದರ್ಶಕವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ತಾರಿಕ್ ರೆಹಮಾನ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಗೆಲುವು ಬಾಂಗ್ಲಾದೇಶದ ಜನರು ರೆಹಮಾನ್ ಅವರ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ದೇಶವನ್ನು ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಯ ಹಾದಿಯಲ್ಲಿ ಮುನ್ನಡೆಸುವ ಅವರ ದೃಷ್ಟಿಕೋನಕ್ಕೆ ಸಂದ ಜನಾದೇಶ ಇದಾಗಿದೆ ಎಂದು ಹೇಳಿದ್ದಾರೆ.

ದ್ವಿಪಕ್ಷೀಯ ಬಾಂಧವ್ಯ ಗಟ್ಟಿಗೊಳಿಸಲು ವ್ಯಾಪಾರ, ತಂತ್ರಜ್ಞಾನ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಇಂಧನ, ಆರೋಗ್ಯ, ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.