ADVERTISEMENT

Sunita, Wilmore Return | ಭೂಮಿಗೆ ಮರಳಿದ ಸುನಿತಾ, ವಿಲ್ಮೋರ್

ಪಿಟಿಐ
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
<div class="paragraphs"><p>ಸುನಿತಾ ವಿಲಿಯಮ್ಸ್</p></div>

ಸುನಿತಾ ವಿಲಿಯಮ್ಸ್

   

ಕೇಪ್ ಕನಾವರಲ್/ನ್ಯೂಯಾರ್ಕ್‌: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್‌) ಒಂಬತ್ತು ತಿಂಗಳು ಕಳೆದ ನಾಸಾದ ಗಗನಯಾನಿಗಳಾದ ಬುಚ್‌ ವಿಲ್ಮೋರ್‌ ಮತ್ತು ಭಾರತ ಮೂಲದ ಸುನಿತಾ ವಿಲಿಯಮ್ಸ್‌ ಅವರು ಭೂಮಿಗೆ ಮರಳಿದ್ದಾರೆ. ಇದರೊಂದಿಗೆ ಈ ಇಬ್ಬರ 286 ದಿನಗಳ ಗಗನ ಪಯಣದ ಸಾಹಸಗಾಥೆಯು ಸುಖಾಂತ್ಯಗೊಂಡಿದೆ. ಅಮೆರಿಕ ಮತ್ತು ಭಾರತದಲ್ಲಿ ಮನೆ ಮಾಡಿದ್ದ ಕಳವಳವು ಮರೆಯಾಗಿದೆ.

ಕಳೆದ ಜೂನ್‌ನಲ್ಲಿ ಐಎಸ್‌ಎಸ್‌ಗೆ ತೆರಳಿದ್ದ ಸುನಿತಾ ಮತ್ತು ಬುಚ್‌ ಅವರನ್ನು ಹೊತ್ತ ಸ್ಪೇಸ್‌ ಎಕ್ಸ್‌ ಕೋಶವು ಫ್ಲಾರಿಡಾ ಪ್ಯಾನ್‌ಹ್ಯಾಂಡಲ್‌ ಕಡಲಿನ ನೀರಿನ ಮೇಲೆ ಬುಧವಾರ ಮುಂಜಾನೆ 3.27ಕ್ಕೆ (ಭಾರತೀಯ ಕಾಲಮಾನ)  ನಿಧಾನವಾಗಿ ಇಳಿಯಿತು. 

ADVERTISEMENT

ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್‌ ಎಂಬ ಗಗನನನೌಕೆಯಲ್ಲಿ ಈ ಇಬ್ಬರು ಐಎಸ್‌ಎಸ್‌ಗೆ ಹೋಗಿದ್ದರು. ಆದರೆ, ಸ್ಟಾರ್‌ಲೈನರ್‌ನ ‍ಪ್ರೊಪಲ್ಶನ್‌ ವ್ಯವಸ್ಥೆಯಲ್ಲಿ (ಮುಂದಕ್ಕೆ ನೂಕುವ ವ್ಯವಸ್ಥೆ) ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ, ಗಗನಯಾನಿಗಳನ್ನು ನಿಗದಿತ ಎಂಟು ದಿನಗಳಲ್ಲಿ ವಾಪಸ್‌ ಕರೆಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 

ಈಗ, ಸ್ಪೇಸ್‌ ಎಕ್ಸ್‌ನ ‘ಡ್ರ್ಯಾಗನ್‌’ ಬಾಹ್ಯಾಕಾಶ ಕೋಶದಲ್ಲಿ ಸುನಿತಾ ಮತ್ತು ಬುಚ್‌ ಅವರನ್ನು ಭೂಮಿಗೆ ಕರೆತರಲಾಗಿದೆ. ಮಂಗಳವಾರ ರಾತ್ರಿ ಐಎಸ್‌ಎಸ್‌ನಿಂದ ಡ್ರ್ಯಾಗನ್‌ ಪಯಣ ಆರಂಭಿಸಿತ್ತು. ತಾಸಿಗೆ ಸುಮಾರು 27 ಸಾವಿರ ಕಿ.ಮೀ. ವೇಗದಲ್ಲಿ ಕೋಶವು ಭೂಮಿಯತ್ತ ನುಗ್ಗಿತ್ತು. ಬಳಿಕ ನಾಲ್ಕು ಪ್ಯಾರಚೂಟ್‌ಗಳನ್ನು ಬಳಸಿ ಕೋಶದ ವೇಗವನ್ನು ನಿಯಂತ್ರಿಸಲಾಯಿತು. ಸಾಗರದ ನೀರಿನ ಮೇಲೆ ಬಂದಿಳಿದ ಕೋಶವನ್ನು ಡಾಲ್ಫಿನ್‌ಗಳು ಕೌತುಕದಿಂದ ಸುತ್ತುವರಿದವು. ಗಗನಯಾನಿಗಳನ್ನು ಡಾಲ್ಫಿನ್‌ಗಳು ಭೂಮಿಗೆ ಸ್ವಾಗತಿಸಿದಂತೆ ಇದು ಭಾಸವಾಯಿತು. 

ರಕ್ಷಣಾ ತಂಡಗಳ ಸದಸ್ಯರು ಕೋಶವನ್ನು ಪರಿಶೀಲನೆಗೆ ಒಳಪಡಿಸಿದರು. ಕೋಶವನ್ನು ಹಡಗಿಗೆ ವರ್ಗಾಯಿಸಿದ ಬಳಿಕ ಬಾಗಿಲುಗಳನ್ನು ತೆರೆಯಲಾಯಿತು. ಗಗನಯಾನಿಗಳನ್ನು ಕೋಶದಿಂದ ಎತ್ತಿ ಹೊರಗೆ ತರಲಾಯಿತು. ತಿಂಗಳುಗಳಿಂದ ಭಾರರಹಿತ ಸ್ಥಿತಿಯಲ್ಲಿದ್ದ ಅವರ ದೇಹಗಳು, ಭೂಮಿಯ ಗುರುತ್ವಾಕರ್ಷಣ ಬಲಕ್ಕೆ ಹೊಂದಿಕೊಳ್ಳಲು ಶ್ರಮಪಡುತ್ತಿದ್ದವು. 

ಕೋಶದ ಕಮಾಂಡರ್‌ ನಿಕ್‌ ಹೇಗ್‌ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್‌ ಗೊರ್ಬುನೊವ್‌ ಅವರೂ ಸುನಿತಾ ಮತ್ತು ಬುಚ್‌ ಜೊತೆಯಲ್ಲಿದ್ದರು. 

ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದರು ಎಂಬುದನ್ನು ಸುನಿತಾ ಮತ್ತು ಬುಚ್‌ ಅವರು ನಿರಾಕರಿಸಿದ್ದಾರೆ. ‘ಅದು ನಮ್ಮ ಕೆಲಸವಾಗಿತ್ತು. ಅದನ್ನು ಸಂಭ್ರಮದಿಂದಲೇ ಮಾಡಿದ್ದೇವೆ. ಕೆಲವೊಮ್ಮೆ ಪ್ರಯಾಸವಾಗಿದ್ದೂ ಇದೆ, ಅದರಲ್ಲಿ ಅನುಮಾನ ಇಲ್ಲ’ ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ಗೆ ಕಳೆದ ವಾರ ಐಎಸ್‌ಎಸ್‌ನಿಂದಲೇ ನೀಡಿದ್ದ ಸಂದರ್ಶನದಲ್ಲಿ ಬುಚ್‌ ಹೇಳಿದ್ದರು.  ‘ನೀವು ಅಲ್ಲಿ ಸಿಲುಕಿಕೊಂಡಿದ್ದೀರಿ, ಅನಿವಾರ್ಯವಾಗಿ ಅಲ್ಲಿ ಉಳಿಯಬೇಕಾಗಿದೆ’ ಮುಂತಾದ ಎಲ್ಲ ಪ್ರಶ್ನೆಗಳಿಗೂ ಅವರು ‘ಇಲ್ಲವೇ ಇಲ್ಲ’ ಎಂಬ ಉತ್ತರವನ್ನೇ ಕೊಟ್ಟಿದ್ದರು.  

ಸುನಿತಾ ಮತ್ತು ವಿಲ್ಮೋರ್ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಒಟ್ಟು 286 ದಿನ ಕಳೆದಿದ್ದಾರೆ. ಈ ಅವಧಿಯಲ್ಲಿ ಅವರು ಭೂಮಿಯನ್ನು 4,576 ಬಾರಿ ಸುತ್ತುಹಾಕಿದ್ದಾರೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಅತಿಥಿಗಳಾಗಿ ತೆರಳಿದ್ದ ಈ ಇಬ್ಬರು ಬಹಳ ಬೇಗ ಅಲ್ಲಿನ ಸಿಬ್ಬಂದಿಯಂತೆ ಬದಲಾದರು. ಅಲ್ಲಿ ಪ್ರಯೋಗಗಳನ್ನು ನಡೆಸಿದರು, ಅಲ್ಲಿನ ಉಪಕರಣಗಳನ್ನು ಸರಿಪಡಿಸುವ ಕೆಲಸ ಮಾಡಿದರು, ಇಬ್ಬರೂ ಒಟ್ಟಾಗಿ ಬಾಹ್ಯಾಕಾಶ ನಡಿಗೆಯಲ್ಲಿ ಭಾಗಿಯಾದರು.

ಮಹಿಳಾ ಗಗನಯಾನಿಗಳ ಪೈಕಿ ಅತಿ ಹೆಚ್ಚಿನ ಅವಧಿಗೆ ಬಾಹ್ಯಾಕಾಶ ನಡಿಗೆಯಲ್ಲಿ ಭಾಗಿಯಾದ ಖ್ಯಾತಿ ಈಗ ಸುನಿತಾ ಅವರದ್ದಾಗಿದೆ. ಸುನಿತಾ ಅವರು ಅಲ್ಲಿಗೆ ತೆರಳಿದ ನಂತರ ನಿಲ್ದಾಣದ ಕಮಾಂಡರ್ ಆಗಿಯೂ ಕೆಲಸ ನಿರ್ವಹಿಸಿದರು.

ಸುನಿತಾ ಮತ್ತು ವಿಲ್ಮೋರ್ ಅವರ ಸುರಕ್ಷತೆಗಾಗಿ ಅಮೆರಿಕದ 21 ಹಿಂದೂ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮ ನಡೆಸಲಾಗಿತ್ತು. 

ಗಗನಯಾನಿಗಳನ್ನು ಹೊತ್ತಿದ್ದ ಬಾಹ್ಯಾಕಾಶ ಕೋಶವು ಜಲಸ್ಪರ್ಶ ಮಾಡಿದ ಕ್ಷಣ

ಸುನಿತಾ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಚ್ಚುವರಿ ಅವಧಿಗೆ ಉಳಿದಿದ್ದ ನೀವು ಸುರಕ್ಷಿತವಾಗಿ ಮರಳಿರುವುದು ಗಮನಾರ್ಹವಾದ ಸಾಧನೆ
ವಿ. ನಾರಾಯಣನ್, ಇಸ್ರೊ ಅಧ್ಯಕ್ಷ
ಸುನಿತಾ ವಿಲಿಯಮ್ಸ್ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು.
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ನಿಮ್ಮ ಪಯಣವು ಸಂಯಮ ಧೈರ್ಯ ಮತ್ತು ವೈಜ್ಞಾನಿಕ ಅನ್ವೇಷಣೆಗೆ ಬದ್ಧವಾದುದಾಗಿತ್ತು. ನಿಮ್ಮ ಸಾಹಸವು ಮನುಷ್ಯ ಸಾಧನೆಗೆ ಎಲ್ಲೆಯೇ ಇಲ್ಲ ಎಂಬುದರ ದ್ಯೋತಕವಾಗಿದೆ.  ಬಾಹ್ಯಾಕಾಶ ಶೋಧದ ಕನಸು ಕಾಣುತ್ತಿರುವ ಅಸಂಖ್ಯ ಭಾರತೀಯರೂ ಸೇರಿ ಜಗತ್ತಿನ ಕೋಟ್ಯಂತರ ಜನರಿಗೆ ನೀವು ಸ್ಫೂರ್ತಿಯಾಗಿದ್ದೀರಿ.
  ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ

ಲಕ್ಷಾಂತರ ಮಂದಿಗೆ ಸ್ಫೂರ್ತಿ: ಮೋದಿ ಶ್ಲಾಘನೆ

ನವದೆಹಲಿ : ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಗೆ ಸ್ವಾಗತಿಸಿದ್ದಾರೆ. ಸುನಿತಾ ಅವರು ಮುಂದಿನ ಹಲವು ತಲೆಮಾರುಗಳಿಗೆ ಸ್ಫೂರ್ತಿಯಾಗಿರುತ್ತಾರೆ ಎಂದು ಶ್ಲಾಘಿಸಿದ್ದಾರೆ.

‘ಅರಿಯದ ಆಕಾಶದ ಎದುರು ಗಗನಯಾನಿಗಳು ತೋರಿದ ಅಚಲವಾದ ಬದ್ಧತೆಯು ಲಕ್ಷಾಂತರ ಮಂದಿಗೆ ಎಂದೆಂದಿಗೂ ಸ್ಫೂರ್ತಿ ನೀಡುತ್ತದೆ. ಬಾಹ್ಯಾಕಾಶ ಸಂಶೋಧನೆ ಅಂದರೆ ಮಾನವನ ಸಾಮರ್ಥ್ಯದ ಮಿತಿಯನ್ನು ಹಿಗ್ಗಿಸುವುದು, ಎದೆಗಾರಿಕೆಯಿಂದ ಕನಸುಗಳನ್ನು ಕಾಣುವುದು, ಅಂತಹ ಕನಸುಗಳನ್ನು ನನಸು ಮಾಡಿಕೊಳ್ಳುವ ಧೈರ್ಯ ತೋರುವುದು’ ಎಂದು ಪ್ರಧಾನಿ ಹೇಳಿದ್ದಾರೆ.

‘ಸುನಿತಾ ಅವರು ತಮ್ಮ ವೃತ್ತಿಯುದ್ದಕ್ಕೂ ಈ ಆಶಯಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ. ಗಗನಯಾನಿಗಳು ಸುರಕ್ಷಿತವಾಗಿ ಮರಳಲು ಶ್ರಮಿಸಿದ ಎಲ್ಲರ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಕೂಡ ಪ್ರಧಾನಿ ಹೇಳಿದ್ದಾರೆ.

ಸುನಿತಾ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಅವಧಿಗೆ ವಾಸ ಮಾಡಿದ್ದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಗಮನಾರ್ಹವಾದ ಸಾಧನೆ ಎಂದು ಬಣ್ಣಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುನಿತಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

‘ಸುನಿತಾ ಅವರು ಧೈರ್ಯದ ಮೂರ್ತ ರೂಪ ಇದ್ದಂತೆ. ಅವರು ಮತ್ತೆ ನಮ್ಮ ನಡುವೆ ಬಂದಿರುವುದು ಒಳ್ಳೆಯ ಸಂಗತಿ. ಸ್ವಾಗತಂ ಸುನಿತಾ’ ಎಂದು ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ ಮಹೀಂದ್ರ ಹೇಳಿದ್ದಾರೆ.

ಗಗನಯಾನಿ ಸುನಿತಾ ವಿಲಿಯಮ್ಸ್ ಅವರು ಸ್ಪೇಸ್‌ಎಕ್ಸ್‌ ಬಾಹ್ಯಾಕಾಶ ಕೋಶದಿಂದ ಹೊರಬಂದ ಕ್ಷಣ

ಪೂರ್ವಜರ ಊರಿನಲ್ಲಿ ಸಂಭ್ರಮ

ಮೆಹ್ಸಾನಾ: ಗುಜರಾತ್‌ನ ಮೆಹ್ಸಾಣಾ ಜಿಲ್ಲೆಯ ಝುಲಾಸನ್ ಎಂಬ ಗ್ರಾಮ ಸುನಿತಾ ವಿಲಿಯಮ್ಸ್ ಅವರ ಪೂರ್ವಜರ ಊರು. ಸುನಿತಾ ಅವರು ಸುರಕ್ಷಿತವಾಗಿ ಭೂಮಿಗೆ ಮರಳಿದ ಸುದ್ದಿ ತಿಳಿದ ಊರಿನ ಜನ ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ, ನರ್ತಿಸಿ, ಊರ ದೇವರಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.

‘ಹರ ಹರ ಮಹಾದೇವ’ ಎಂದು ಜನ ಖುಷಿಪಟ್ಟರು.

ಸುನಿತಾ ಅವರು ಸುರಕ್ಷಿತವಾಗಿ ವಾಪಸ್ಸಾಗಲಿ ಎಂದು ಪ್ರಾರ್ಥಿಸಿ ಊರಿನ ಜನ ಯಜ್ಞ ನಡೆಸಿದ್ದರು. ಸುನಿತಾ ಅವರು ಶೀಘ್ರವೇ ಊರಿಗೆ ಭೇಟಿ ನೀಡಲಿ, ಶಾಲೆಯ ಮಕ್ಕಳಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದರು.

ಊರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕೂಡ ಈ ಸಂದರ್ಭದಲ್ಲಿ ಸಂಭ್ರಮದಿಂದ ಗರ್ಬಾ ನೃತ್ಯ ಮಾಡಿದರು, ಶಾಲೆಯಿಂದ ಊರಿನ ದೇವಿಯ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ಸುನಿತಾ ಅವರ ತಂದೆ ದೀಪಕ್ ಪಾಂಡ್ಯ ಅವರು ಝುಲಾಸನ್ ಗ್ರಾಮದವರು. 

ಟಿ.ವಿ. ಪರದೆ ಮೇಲೆ ಹೂವಿನ ಮಳೆ:

ಸುನಿತಾ ಅವರು ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ ಎಂಬ ಸುದ್ದಿಯು ವಾಹಿನಿಗಳಲ್ಲಿ ಬಿತ್ತರಗೊಂಡಿದ್ದೇ ತಡ, ಟಿ.ವಿ. ಮುಂದೆ ನಿಂತಿದ್ದ 84 ವರ್ಷ ವಯಸ್ಸಿನ ದಿನೇಶ್ ರಾವಲ್ ಅವರು ಚಪ್ಪಾಳೆ ತಟ್ಟಲು ಆರಂಭಿಸಿದರು.

ನಂತರ ಕೆಲವೇ ಕ್ಷಣಗಳಲ್ಲಿ ಅವರು ಟಿ.ವಿ. ಪರದೆಯ ಮೇಲೆ ಗುಲಾಬಿಯ ಎಸಳುಗಳ ಮಳೆ ಸುರಿಸಿದರು. ಸಂತಸ ಮತ್ತು ಸಮಾಧಾನ ವ್ಯಕ್ತಪಡಿಸಿದರು. ದಿನೇಶ್ ಅವರು ಸುನಿತಾ ಅವರ ಹತ್ತಿರದ ಸಂಬಂಧಿ.

ಸುನಿತಾ ಅವರು ಸುರಕ್ಷಿತವಾಗಿ ಮರಳಿದ್ದಕ್ಕೆ ದಿನೇಶ್ ಕುಟುಂಬದವರು ಸಿಹಿ ಹಂಚಿದರು, ದೇವರಿಗೆ ಧನ್ಯವಾದ ಅರ್ಪಿಸಿದರು. ಸುನಿತಾ ಅವರು ಸುರಕ್ಷಿತವಾಗಿ ಮರಳುವಂತೆ ಆಗಲಿ ಎಂದು ಪ್ರಾರ್ಥಿಸಿ, ಊರಿನ ಜನ ದೇವಸ್ಥಾನದಲ್ಲಿ ಅಖಂಡ ಜ್ಯೋತಿಯನ್ನು ಹೆಚ್ಚಿದ್ದರು. ದೇವಸ್ಥಾನದಲ್ಲಿ ದೇವಿಯ ಮೂರ್ತಿಯ ಬದಿಯಲ್ಲಿ ಸುನಿತಾ ಅವರ ಭಾವಚಿತ್ರವನ್ನೂ ಇರಿಸಿದ್ದರು.

‘ನಮಗೆಷ್ಟು ಸಂತಸ ಆಗಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇಡೀ ಊರು ಸುನಿತಾ ಅವರ ಸುರಕ್ಷತೆಗಾಗಿ ಪೂಜೆ ಸಲ್ಲಿಸಿದೆ’ ಎಂದು ದೇವಸ್ಥಾನ ಅರ್ಚಕ ದಿನೇಶ್ ಪಾಂಡ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.