ADVERTISEMENT

ಟ್ರಂಪ್‌– ಝೆಲೆನ್‌ಸ್ಕಿ ಜಟಾಪಟಿ: ನ್ಯಾಟೊ ಮುಖ್ಯಸ್ಥ ಹೇಳಿದ್ದೇನು?

ಏಜೆನ್ಸೀಸ್
Published 2 ಮಾರ್ಚ್ 2025, 6:56 IST
Last Updated 2 ಮಾರ್ಚ್ 2025, 6:56 IST
   

ಲಂಡನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗಿನ ಸಂಬಂಧವನ್ನು ಸರಿಪಡಿಸಿಕೊಳ್ಳಲು ದಾರಿ ಕಂಡುಕೊಳ್ಳಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರಿಗೆ ತಿಳಿಸಿರುವುದಾಗಿ ‘ನೇಟೊ’ ಒಕ್ಕೂಟದ ಮಹಾ ಪ್ರಧಾನ ಕಾರ್ಯದರ್ಶಿ ಮಾರ್ಕ್‌ ರುಟ್ ಹೇಳಿದ್ದಾರೆ.

ಅಮೆರಿಕದ ಶ್ವೇತಭವನದಲ್ಲಿ ಟ್ರಂಪ್ ಮತ್ತು ಝೆಲೆನ್‌ಸ್ಕಿ ಅವರ ನಡುವೆ ಶುಕ್ರವಾರ ವಾಕ್ಸಮರ ನಡೆದ ನಂತರದಲ್ಲಿ ರುಟ್ ಅವರು ಈ ಕಿವಿಮಾತು ಹೇಳಿದ್ದಾರೆ. ‘ಉಕ್ರೇನ್‌ಗಾಗಿ ಅಧ್ಯಕ್ಷ ಟ್ರಂಪ್ ಅವರು ಇದುವರೆಗೆ ಮಾಡಿರುವುದನ್ನು ನಿಜವಾಗಿಯೂ ಗೌರವಿಸಬೇಕು ಎಂದು ಝೆಲೆನ್‌ಸ್ಕಿ ಅವರಿಗೆ ಹೇಳಿದ್ದೇನೆ’ ಎಂದು ರುಟ್ ಅವರು ಬಿಬಿಸಿ ಪ್ರತಿನಿಧಿಗೆ ತಿಳಿಸಿದ್ದಾರೆ. ಟ್ರಂಪ್ ನೇತೃತ್ವದ ಆಡಳಿತವು 2019ರಲ್ಲಿ ಉಕ್ರೇನ್‌ಗೆ ಜಾವೆಲಿನ್‌ ಯುದ್ಧಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ನೀಡಲು ಅನುಮತಿ ಕೊಟ್ಟಿತ್ತು. ಈ ಕ್ಷಿಪಣಿಗಳನ್ನು ಉಕ್ರೇನ್‌ 2022ರಲ್ಲಿ ರಷ್ಯಾ ವಿರುದ್ಧ ಬಳಸಿತ್ತು.

ಟ್ರಂಪ್ ಮತ್ತು ಝೆಲೆನ್‌ಸ್ಕಿ ನಡುವಿನ ಶುಕ್ರವಾರದ ಸಭೆಯಲ್ಲಿ ನಡೆದ ವಿದ್ಯಮಾನಗಳು ‘ದುರದೃಷ್ಟಕರ’ ಎಂದು ಹೇಳಿದ ರುಟ್, ‘ಉಕ್ರೇನ್ ಮತ್ತು ರಷ್ಯಾ ನಡುವೆ ದೀರ್ಘಾವಧಿಗೆ ಶಾಂತಿ ನೆಲಸುವಂತೆ ಮಾಡುವ ವಿಚಾರದಲ್ಲಿ ಅಮೆರಿಕದ ಆಡಳಿತವು ಬಹುವಾಗಿ ತೊಡಗಿಸಿಕೊಂಡಿದೆ ಎಂಬುದು ನನಗೆ ಗೊತ್ತಿದೆ’ ಎಂದಿದ್ದಾರೆ.

ADVERTISEMENT

‘ಭಾನುವಾರ ಯುರೋಪಿಯನ್‌ ಒಕ್ಕೂಟದ ನಾಯಕರು ಲಂಡನ್‌ನಲ್ಲಿ ಭೇಟಿಯಾಗಲಿದ್ದು, ಉಕ್ರೇನ್‌ಗೆ ಭದ್ರತಾ ಖಾತರಿಗಳನ್ನು ನೀಡುವ ಮೂಲಕ ಭವಿಷ್ಯದ ಶಾಂತಿ ಒಪ್ಪಂದವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.