ವಾಷಿಂಗ್ಟನ್: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆಯನ್ನು ‘ದುರಂತ’ ಎಂದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ‘ಜನದಟ್ಟಣೆ ನಿಯಂತ್ರಿಸುವ ವಿಚಾರದಲ್ಲಿ ನಾವು ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ’ ಎಂದಿದ್ದಾರೆ.
ಸಂಸದರ ನಿಯೋಗದ ನೇತೃತ್ವ ವಹಿಸಿ ಅಮೆರಿಕ ಪ್ರವಾಸದಲ್ಲಿರುವ ಅವರು, ಬೆಂಗಳೂರಿನಲ್ಲಿ ನಡೆದ ದುರ್ಘಟನೆ ಕುರಿತು ಪ್ರತಿಕ್ರಿಯಿಸಿದರು. ‘ಕರ್ನಾಟಕದಲ್ಲಿರುವ ನಿಮ್ಮದೇ ಪಕ್ಷದ ನೇತೃತ್ವದ ಸರ್ಕಾರಕ್ಕೆ ಈ ವಿಷಯದಲ್ಲಿ ಏನಾದರೂ ಸಲಹೆ ನೀಡಲು ಬಯಸುತ್ತೀರಾ’ ಎಂಬ ಪ್ರಶ್ನೆಗೆ, ‘ಜನದಟ್ಟಣೆ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಾವು ವಿಭಿನ್ನ ಮಾರ್ಗೋಪಾಯಗಳನ್ನು ಕಂಡುಕೊಳ್ಳಲೇಬೇಕಿದೆ. ಅಲ್ಲಿರುವ ಸರ್ಕಾರ ಈ ವಿಷಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ’ ಎಂದರು.
‘ನಿಜವಾಗಿಯೂ ಇದೊಂದು ದುರಂತ. ದುರ್ಘಟನೆಯಲ್ಲಿ ಮಡಿದವರಿಗಾಗಿ ನನ್ನ ಹೃದಯ ಮಿಡಿಯುತ್ತದೆ’ ಎಂದು ತರೂರ್ ಹೇಳಿದರು.
‘ನಮ್ಮ ಜನರ ಭಾವನಾತ್ಮಕತೆ ಮತ್ತು ಸಂಭ್ರಮಕ್ಕೆ ತಕ್ಕಂತೆ ನಾವು ಜನದಟ್ಟಣೆ ನಿಯಂತ್ರಿಸುವಲ್ಲಿ ಉತ್ತಮವಾಗಿಲ್ಲ ಎಂಬುದು ಬೇಸರದ ಸಂಗತಿ. ಇದರಿಂದ ನಾವು ಪಾಠ ಕಲಿಯುತ್ತೇವೆ. ಆದರೆ, ನಡೆದಿರುವುದು ತೀರಾ ನಾಚಿಕೆಗೇಡಿನ ಘಟನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.