ADVERTISEMENT

ಕೊರೊನಾ:ಸೂಕ್ತ ನಿರ್ವಹಣೆ ತೋರದ ವಿಶ್ವ ಆರೋಗ್ಯ ಸಂಸ್ಥೆ,ಧನಸಹಾಯ ನಿಲ್ಲಿಸಿದ ಟ್ರಂಪ್

ಏಜೆನ್ಸೀಸ್
Published 15 ಏಪ್ರಿಲ್ 2020, 2:07 IST
Last Updated 15 ಏಪ್ರಿಲ್ 2020, 2:07 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌    

ವಾಷಿಂಗ್ಟನ್‌: ಜಗತ್ತಿನಾದ್ಯಂತ ಕೋವಿಡ್‌–19 ವ್ಯಾಪಿಸುವ ಮುನ್ನ ಚೀನಾದಲ್ಲಿ ಅದರ ಹರಡುವಿಕೆ, ಗಂಭೀರತೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮುಚ್ಚಿಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ. ಅದೇ ಕಾರಣದಿಂದಾಗಿ ಅಮೆರಿಕದಿಂದ ಧನಸಹಾಯ ರದ್ದಪಡಿಸುತ್ತಿರುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ.

'ಕೊರೊನಾ ವೈರಸ್‌ ವ್ಯಾಪಿಸುತ್ತಿರುವುದಕ್ಕೆ ಸಂಬಂಧಿಸಿದ ವಿಚಾರಗಳನ್ನು ಮುಚ್ಚಿಟ್ಟದ್ದು ಹಾಗೂ ಸೂಕ್ತ ನಿರ್ವಹಣೆ ತೋರದಿರುವುದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ' ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಆವರೆಗೂ ವಿಶ್ವ ಆರೋಗ್ಯ ಸಂಸ್ಥೆ ಅಮೆರಿಕದಿಂದ ಧನಸಹಾಯ ರದ್ದುಪಡಿಸುವಂತೆ ಆಡಳಿತಕ್ಕೆ ಸೂಚಿಸಿದ್ದಾರೆ.

ಟಂಪ್‌ ಪ್ರಕಾರ, ವಿಶ್ವ ಸಂಸ್ಥೆಯ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಆರ್ಥಿಕ ಸಹಕಾರವನ್ನು ಅಮೆರಿಕ ನೀಡುತ್ತಿದೆ. ಕಳೆದ ವರ್ಷ ಅಮೆರಿಕ 400 ಮಿಲಿಯನ್‌ ಡಾಲರ್‌ ಧನಸಹಾಯ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಸೋಂಕು ವ್ಯಾಪಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಪಾರದರ್ಶಕತೆ ಕಾಯ್ದುಕೊಂಡಿಲ್ಲ... 'ವಿಶ್ವ ಆರೋಗ್ಯ ಸಂಸ್ಥೆಗೆ ತಲುಪುವ ಎಲ್ಲ ಹಣದಿಂದ ಏನೆಲ್ಲ ಆಗುತ್ತಿದೆ ಎಂಬುದನ್ನು ಈಗ ಚರ್ಚಿಸಬೇಕಿದೆ' ಎಂದಿದ್ದಾರೆ.

ADVERTISEMENT

'ಕೋವಿಡ್‌–19 ಸಾಂಕ್ರಾಮಿಕವಾಗಿರುವ ಸಮಯದಲ್ಲಿ ಅಮೆರಿಕದ ಕೊಡುಗೆ ಸೂಕ್ತ ರೀತಿಯಲ್ಲಿ ಬಳಕೆಯಾಗುವ ಬಗ್ಗೆ ಕಾಳಜಿ ವಹಿಸಿದೆ' ಎಂದು ಟ್ರಂಪ್‌ ಹೇಳಿದ್ದಾರೆ.

ಚೀನಾದಿಂದ ಶುರುವಾದ ಕೊರೊನಾ ವೈರಸ್‌ ಸೋಂಕು, ಅಲ್ಲಿ 3,341 ಜನರನ್ನು ಬಲಿ ಪಡೆಯಿತು. ಆದರೆ, ಸಾಂಕ್ರಾಮಿಕವಾದ ಸೋಂಕು ಈವರೆಗೂ ಜಗತ್ತಿನಾದ್ಯಂತ 1.30 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. ಈವರೆಗೆ ಒಟ್ಟು ಸೋಂಕು ದೃಢಪಟ್ಟಿರುವ ಪ್ರಕರಣಗಳು 20 ಲಕ್ಷ ದಾಟಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳು ದಾಖಲಾಗಿದೆ. 6,12,576 ಪ್ರಕರಣಗಳ ಪೈಕಿ 25,000ಕ್ಕೂ ಹೆಚ್ಚುಸೋಂಕಿತರು ಸಾವಿಗೀಡಾಗಿದ್ದಾರೆ.

ಕೊರೊನಾ ಸೋಂಕು ಸಾಂಕ್ರಾಮಿಕವಾಗಿರುವುದರಿಂದ ಜಗತ್ತಿನಾದ್ಯಂತ ಸುಮಾರು 75,000 ಜನರು ಸಾವಿಗೀಡಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿತು. ಈ ಬಗ್ಗೆ ಜಗತ್ತಿನಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.