ಹಿಂಸಾಚಾರ ಪೀಡಿತ ನೇಪಾಳದಲ್ಲಿ ಗೋಡೆಬರಹದ ಎದುರುಸಲಿಕೆ ಹಿಡಿದ ಯುವಕ
ರಾಯಿಟರ್ಸ್ ಚಿತ್ರ
ಕಠ್ಮಂಡು: ಪ್ರತಿಭಟನೆ, ಹಿಂಸಾಚಾರದಿಂದ ಅರಾಜಕತೆ ಸೃಷ್ಟಿಯಾಗಿರುವ ನೇಪಾಳದಲ್ಲಿ ಮಧ್ಯಂತರ ಸರ್ಕಾರ ರಚನೆ ಕುರಿತು ‘ಜೆನ್ ಝಿ’ ತಲೆಮಾರಿನ ಮುಖಂಡರು ಅಧ್ಯಕ್ಷ ರಾಮಚಂದ್ರ ಪೌಡೆಲ್ ಹಾಗೂ ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಸೇನಾ ಪ್ರಧಾನ ಕಚೇರಿ ಭದ್ರಕಾಳಿಯಲ್ಲಿ ಗುರುವಾರ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ, ಕಠ್ಮಂಡು ಮೇಯರ್ ಬಾಲೇಂದ್ರ ಶಾ ಮತ್ತು ಇನ್ನಿಬ್ಬರ ಹೆಸರು ಕೇಳಿಬಂದಿದ್ದು, ಮಧ್ಯಂತರ ಸರ್ಕಾರದ ಚುಕ್ಕಾಣಿ ಯಾರಿಗೆ ನೀಡಬೇಕು ಎಂಬುದರ ಕುರಿತು ಜೆನ್ ಝಿ ಗುಂಪು ಚರ್ಚಿಸಲಿದೆ ಎನ್ನಲಾಗಿದೆ.
ವಿವಿಧ ಸಾಮಾಜಿಕ ಮಾಧ್ಯಮಗಳ ನಿಷೇಧದಿಂದ ಆರಂಭವಾದ ಯುವ ಸಮುದಾಯದ ಪ್ರತಿಭಟನೆ ನಂತರ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಆಕ್ರೋಶವೂ ಸೇರಿ ಹೋರಾಟದ ಕಾವು ಹೆಚ್ಚಿತು. ಇದರ ಪರಿಣಾಮ ಹಲವರು ಪ್ರಾಣ ಕಳೆದುಕೊಂಡರು. ಹೋರಾಟಕ್ಕೆ ಮಣಿದು ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ರಾಜೀನಾಮೆ ನೀಡಿದರು. ಇದೀಗ ನೂತನ ಪ್ರಧಾನಿ ಆಯ್ಕೆ ಕುರಿತ ಚರ್ಚೆಗೆ ವೇದಿಕೆ ಸಜ್ಜಾಗಿದೆ.
ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆ ನಡೆಯಲಿದೆ ಎಂದು ಖಚಿತಪಡಿಸಿದ ಸೇನಾ ವಕ್ತಾರರು, ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿಲ್ಲ.
‘ವಿವಿಧ ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆ ಆಯೋಜಿಸಲಾಗಿದೆ. ದೇಶದ ಸದ್ಯದ ಪರಿಸ್ಥಿತಿ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ’ ಎಂದಿದ್ದಾರೆ.
ನೂರು ಸಂಖ್ಯೆಯಲ್ಲಿರುವ ಯುವಕರು ಸಭೆ ನಡೆಯಲಿರುವ ಸೇನಾ ಮುಖ್ಯ ಕಚೇರಿ ಎದುರು ಜಮಾಯಿಸಿದ್ದಾರೆ. ಬುಧವಾರವೂ ಇಲ್ಲಿ ಸಭೆ ನಡೆದರೂ, ಯಾವುದೇ ನಿರ್ಧಾರ ಅಂತಿಮಗೊಂಡಿಲ್ಲ. ಮಧ್ಯಂತರ ಸರ್ಕಾರದ ಮುಖ್ಯಸ್ಥರು ಯಾರಾಗಬೇಕು ಎಂಬುದರ ಕುರಿತು ಚರ್ಚೆಗಳು ನಡೆದವು ಎಂದು ಮೂಲಗಳು ತಿಳಿಸಿವೆ.
ಕರ್ಕಿ ಮತ್ತು ಶಾ ಹೊರತುಪಡಿಸಿ, ನೇಪಾಳ ಇಂಧನ ಪ್ರಾಧಿಕಾರದ ಸಿಇಒ ಕುಲ್ಮನ್ ಘಿಸಿಂಗ್ ಮತ್ತು ಮೇಯರ್ ಧರಣ್ ಹರ್ಕ ಸಂಪಂಗ್ ಅವರ ಹೆಸರುಗಳೂ ಕೇಳಿಬಂದಿವೆ.
ಮೇಯರ್ ಶಾ ಅವರು ಮಾಜಿ ಮುಖ್ಯ ನ್ಯಾಯಮೂರ್ತಿ ಕರ್ಕಿ ಅವರನ್ನು ಬೆಂಬಲಿಸಿದ್ದಾರೆ. ಆದರೆ ನೂತನ ಸಂಪುಟದ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಇವರ ಹೆಸರಿಗೂ ಜೆನ್ ಝಿ ಸಮುದಾಯದ ಒಂದು ಗುಂಪು ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಪ್ರಮುಖ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಕಠ್ಮಂಡುವಿನ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.