ನರೇಂದ್ರ ಮೋದಿ ಮತ್ತು ಸುಶೀಲಾ ಕಾರ್ಕಿ
–ಪಿಟಿಐ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಸುಶೀಲಾ ಕಾರ್ಕಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
‘ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸುಶೀಲಾ ಕಾರ್ಕಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೇಪಾಳದ ಸಹೋದರ–ಸಹೋದರಿಯರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತ ಸಂಪೂರ್ಣವಾಗಿ ಬದ್ಧವಾಗಿದೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೇಪಾಳದ ಮಧ್ಯಂತರ ಸರ್ಕಾರದ ನೂತನ ಪ್ರಧಾನಿಯಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ (73) ಅವರು ಶುಕ್ರವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರ್ಕಿ ಅವರಿಗೆ ಅಧ್ಯಕ್ಷ ರಾಮಚಂದ್ರ ಪೌದೆಲ್, ಉಪಾಧ್ಯಕ್ಷ ರಾಮ ಸಹಾಯ್ ಯಾದವ್, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಮಾನ್ ಸಿಂಗ್ ರಾವತ್ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.
‘ಜೆನ್–ಝಿ’ ಪ್ರತಿಭಟನೆಯಿಂದಾಗಿ ಈ ವಾರದ ಆರಂಭದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ದಿಢೀರ್ ರಾಜೀನಾಮೆಯ ನಂತರ ನೇಪಾಳದಲ್ಲಿ ತಲೆತೋರಿದ್ದ ರಾಜಕೀಯ ಅನಿಶ್ಚಿತತೆಗೆ ಇದರೊಂದಿಗೆ ತೆರೆಬಿದ್ದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.