ADVERTISEMENT

ನೇಪಾಳ | ಸಹಜ ಸ್ಥಿತಿಯತ್ತ ಕಠ್ಮಂಡು: ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಪುನರಾರಂಭ

ಪಿಟಿಐ
Published 12 ಸೆಪ್ಟೆಂಬರ್ 2025, 14:35 IST
Last Updated 12 ಸೆಪ್ಟೆಂಬರ್ 2025, 14:35 IST
<div class="paragraphs"><p>ಕಠ್ಮಂಡುವಿನಲ್ಲಿ ಶುಕ್ರವಾರ ನಿಷೇಧಾಜ್ಞೆ ಸಡಿಲಗೊಳಿಸಿದ ಸಂದರ್ಭದಲ್ಲಿ ತರಕಾರಿ ಹಾಗೂ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಮಾರುಕಟ್ಟೆಗಳತ್ತ ಹೆಜ್ಜೆಹಾಕಿದ್ದರು&nbsp; </p></div>

ಕಠ್ಮಂಡುವಿನಲ್ಲಿ ಶುಕ್ರವಾರ ನಿಷೇಧಾಜ್ಞೆ ಸಡಿಲಗೊಳಿಸಿದ ಸಂದರ್ಭದಲ್ಲಿ ತರಕಾರಿ ಹಾಗೂ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಮಾರುಕಟ್ಟೆಗಳತ್ತ ಹೆಜ್ಜೆಹಾಕಿದ್ದರು 

   

ಎಎಫ್‌ಪಿ ಚಿತ್ರ

ಕಠ್ಮಂಡು: ನಿರ್ಬಂಧಗಳನ್ನು ಸಡಿಲಗೊಳಿಸಿದ ಬೆನ್ನಲ್ಲೇ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ನಿಧಾನವಾಗಿ ಪುನರಾರಂಭಗೊಂಡಿವೆ. ಇದರೊಂದಿಗೆ ಕಣಿವೆ ಪ್ರದೇಶದ ಪೊಲೀಸರು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ADVERTISEMENT

ಇಲ್ಲಿನ ಸುಪ್ರೀಂಕೋರ್ಟ್‌ ಮತ್ತು ಬ್ಯಾಂಕ್‌ಗಳು ಕಾರ್ಯಾರಂಭಿಸಲು ಸಿದ್ಧವಾಗಿವೆ.

ಸರ್ಕಾರದ ವಿರುದ್ಧದ ಪ್ರತಿಭಟನೆ ವೇಳೆ ಸಂಸತ್‌ ಕಟ್ಟಡ ಸೇರಿದಂತೆ ಪ್ರಮುಖ ಕಟ್ಟಡಗಳು, ಹತ್ತಾರು ಪೊಲೀಸ್‌ ಠಾಣೆಗಳು, ಚೆಕ್‌ಪೋಸ್ಟ್‌ಗಳ ಮೇಲೆ ಪ್ರತಿಭಟನಕಾರರು ದಾಳಿ ಮಾಡಿ ಹಾನಿಗೊಳಿಸಿದ್ದರು. ಅದರಲ್ಲೂ ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಬ್ಯಾಂಕ್‌ ಕಚೇರಿಗಳು ಪೂರ್ಣಪ್ರಮಾಣದಲ್ಲಿ ಹಾನಿಗೊಳಗಾಗಿದೆ.

‘ನ್ಯಾಯಾಲಯ ಕಲಾಪವನ್ನು ಮತ್ತೆ ಆರಂಭಿಸುವ ನಿರ್ಧಾರವನ್ನು ತುರ್ತು ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಪ್ರಕಾಶ್‌ ಮಾನ್‌ ಸಿಂಗ್‌ ಹೇಳಿದ್ದಾರೆ. 

‘ನ್ಯಾಯಾಲಯದ ಪ್ರಮುಖ ದಾಖಲೆಗಳಿಗೆ ಶಾಶ್ವತ ಹಾನಿಯಾಗಿದೆ’ ಎಂದು ತಿಳಿಸಿದ್ದಾರೆ.

‘ಪೊಲೀಸ್‌ ಠಾಣೆ ಮತ್ತು ಚೆಕ್‌ಪೋಸ್ಟ್‌ಗಳು ಮತ್ತೆ ಕಾರ್ಯಾಚರಣೆ ಆರಂಭಿಸಿವೆ. ಪೊಲೀಸರು ಮತ್ತು ಸಶಸ್ತ್ರ ಪೊಲೀಸ್‌ ಪಡೆಯ ಸಿಬ್ಬಂದಿ ಚೆಕ್‌ಪೋಸ್ಟ್‌ ಮತ್ತು ರಸ್ತೆಗಳಲ್ಲಿ ಗಸ್ತು ನಡೆಸುತ್ತಿದ್ದಾರೆ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ಉಳಿದಿರುವ ಮೂಲಸೌಕರ್ಯಗಳನ್ನು ಬಳಸಿಕೊಂಡು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ಪೊಲೀಸ್‌ ಇಲಾಖೆಯ ವಕ್ತಾರ ಎಸ್‌ಎಸ್‌ಪಿ ಶೇಖರ್‌ ಖನಾಲ್ ಅವರು ತಿಳಿಸಿದ್ದಾರೆ.

‘ಹಾನಿಗೊಂಡಿರುವ ಪೊಲೀಸ್‌ ಠಾಣೆಗಳ ಪುನರ್‌ನಿರ್ಮಾಣಕ್ಕೆ ಸ್ಥಳೀಯರು ಕೈಜೋಡಿಸುತ್ತಿದ್ದಾರೆ. ಪೊಲೀಸರಿಗೆ ಸಹಾಯ ಮಾಡುವಂತೆ ಸಮುದಾಯಗಳ ನಾಯಕರು ಕರೆಕೊಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ. 

ಪ್ರತಿಭಟನಕಾರರ ದಾಳಿಯಿಂದ ತಪ್ಪಿಸಿಕೊಳ್ಳಲು ಹಲವು ಪೊಲೀಸರು ಸೇನಾ ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದರು.

ಪ್ರಮಖ ಅಂಶಗಳು:

* ಹಿಂಸಾಚಾರ ಹಿನ್ನೆಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿ ನಂತರ ದೇಶದಲ್ಲಿ ಸಿಲುಕಿರುವ ವಿದೇಶಿ ನಾಗರಿಕರು ತಮ್ಮ ರಾಷ್ಟ್ರಗಳಿಗೆ ವಾಪಸಾಗಲು ಅನುವಾಗುವಂತೆ ನೇಪಾಳ ಸರ್ಕಾರ ತಾತ್ಕಾಲಿಕ ಕ್ರಮಗಳನ್ನು ಕೈಗೊಂಡಿದೆ. ವೀಸಾ ಮತ್ತಿತರ ನಿಯಮಗಳನ್ನು ಸಡಿಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ 

* ‘ಜೆನ್‌–ಝಿ’ ಪ್ರತಿಭಟನೆಯಿಂದಾಗಿ ನೇಪಾಳದ ಹೋಟೆಲ್‌ ಉದ್ಯಮಕ್ಕೆ 25 ಶತಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಹೋಟೆಲ್‌ ಅಸೋಸಿಯೇಷನ್ ನೇಪಾಳ (ಎಚ್‌ಎಎನ್‌) ಹೇಳಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.