ADVERTISEMENT

ನೇಪಾಳ: ಮೇಲ್ಮನೆ ಚಳಿಗಾಲದ ಅಧಿವೇಶನ ಕರೆಯಲು ಮನವಿ

ಪಿಟಿಐ
Published 26 ಡಿಸೆಂಬರ್ 2020, 15:20 IST
Last Updated 26 ಡಿಸೆಂಬರ್ 2020, 15:20 IST
ಕೆ.ಪಿ.ಶರ್ಮಾ ಒಲಿ
ಕೆ.ಪಿ.ಶರ್ಮಾ ಒಲಿ   

ಕಠ್ಮಂಡು: ಜನವರಿ 1ರಂದು ಸಂಸತ್ತಿನ ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯುವಂತೆ ಪ್ರಧಾನಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಸರ್ಕಾರವು ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರನ್ನು ಕೋರಿದೆ.

ಒಲಿ ಅವರ ಶಿಫಾರಸಿನಂತೆ ವಿದ್ಯಾದೇವಿ ಅವರು ಹೋದ ಭಾನುವಾರ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಆದೇಶಿಸಿದ್ದರು. ಆ ನಂತರ ರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿತ್ತು.

‘ಜನವರಿ 1ರಂದು ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡುವ ನಿರ್ಧಾರವನ್ನು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು’ ಎಂದು ಆರೋಗ್ಯ ಸಚಿವ ಹೃದಯೇಶ್‌ ತ್ರಿಪಾಠಿ ಅವರು ಕಠ್ಮಂಡು ಪೋಸ್ಟ್‌ ದಿನಪತ್ರಿಕೆಗೆ ತಿಳಿಸಿದ್ದಾರೆ.

ಸಭೆಗೂ ಮುನ್ನ ಒಲಿ ಅವರು ಈ ಹಿಂದೆ ಮಾವೋವಾದಿ ನಾಯಕರೆಂದು ಗುರುತಿಸಿಕೊಂಡಿದ್ದ ಐವರು ಸೇರಿದಂತೆ ಒಟ್ಟು ಎಂಟು ಮಂದಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿದರು. ಜೊತೆಗೆ ತಮ್ಮ ಆಪ್ತ ಸಚಿವರ ಖಾತೆಗಳನ್ನೂ ಬದಲಾವಣೆ ಮಾಡಿದ್ದಾರೆ ಎಂದೂ ಹೇಳಲಾಗಿದೆ.

ಸಂಸತ್‌ ವಿಸರ್ಜನೆಯ ಬಳಿಕ ಒಲಿ ಅವರ ವಿರೋಧಿ ಪುಷ್ಪ ಕಮಲ್‌ ದಹಾಲ್‌ (ಪ್ರಚಂಡ) ಅವರ ಬಣದ ಏಳು ಮಂದಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ಸಂಸತ್ತಿನ ಬಜೆಟ್‌ ಅಧಿವೇಶನವನ್ನು ಜುಲೈ 2ಕ್ಕೆ ಮುಂದೂಡಿದ್ದಾರೆ. ನೇಪಾಳ ಸಂವಿಧಾನದ ಪ್ರಕಾರ ಮೇಲ್ಮನೆ ಹಾಗೂ ಕೆಳಮನೆಯ ಅಧಿವೇಶನಗಳ ನಡುವಣ ಅಂತರವು ಆರು ತಿಂಗಳು ಮೀರುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.