ADVERTISEMENT

ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ

ಪಿಟಿಐ
Published 20 ಮಾರ್ಚ್ 2023, 13:10 IST
Last Updated 20 ಮಾರ್ಚ್ 2023, 13:10 IST
ಪುಷ್ಪ ಕಮಲ್‌ ದಹಲ್ ‘ಪ್ರಚಂಡ’
ಪುಷ್ಪ ಕಮಲ್‌ ದಹಲ್ ‘ಪ್ರಚಂಡ’   

ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್ ‘ಪ್ರಚಂಡ’ ಅವರು ಸೋಮವಾರ ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ಹೊಸ ಸರ್ಕಾರ ರಚನೆಯಾದ ಮೂರು ತಿಂಗಳ ಒಳಗಾಗಿ ಎರಡು ಬಾರಿ ವಿಶ್ವಾಸಮತ ಗೆದ್ದಂತಾಗಿದೆ.

275 ಸದಸ್ಯ ಬಲದ ಸಂಸತ್ತಿನಲ್ಲಿ 172 ಸದಸ್ಯರ ಬೆಂಬಲ ಪಡೆಯುವ ಮೂಲಕ ಬಹುಮತ ಸಾಬೀತುಪಡಿಸಿದರು. ಇತರ 89 ಸದಸ್ಯರು ಪುಷ್ಪ ಕಮಲ್‌ ವಿರುದ್ಧ ಮತ ಚಲಾಯಿಸಿದರೆ, ಒಬ್ಬರು ಮತದಾನದಿಂದ ದೂರ ಉಳಿದರು.

ADVERTISEMENT

ನೇಪಾಳಿ ಕಾಂಗ್ರೆಸ್‌, ಸಿಪಿಎನ್‌–ಮಾವೊಯಿಸ್ಟ್‌ ಸೆಂಟರ್‌, ರಾಷ್ಟ್ರೀಯ ಸ್ವತಂತ್ರ ಪಕ್ಷ, ಜನತಾ ಸಮಾಜವಾದಿ ಪಕ್ಷ ನೇಪಾಳ, ಸಿಪಿಎನ್‌ –ಯುನಿಫೈಡ್‌ ಸೋಷಿಯಲಿಸ್ಟ್‌, ಲೋಕತಾಂತ್ರಿಕ ಸಮಾಜವಾದಿ ಪಕ್ಷ ನೇಪಾಳ, ರಾಷ್ಟ್ರೀಯ ಜನಮೋರ್ಚಾ ಮತ್ತು ಆಮ್‌ ಜನತಾ ಮತ್ತಿತರ ಪಕ್ಷಗಳು ಪ್ರಚಂಡ ಅವರಿಗೆ ಬೆಂಬಲ ನೀಡಿದವು.

ಸಿಪಿಎನ್‌–ಯುಎಂಎಲ್‌ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಕ್ಷಗಳು ಪ್ರಚಂಡ ಅವರ ವಿರುದ್ಧ ಮತ ಹಾಕಿದವು. ನೇಪಾಳ ವರ್ಕರ್ಸ್‌ ಮತ್ತು ಪೀಸಂಟ್ಸ್‌ ಪಕ್ಷ ತಟಸ್ಥ ನಿಲುವು ತಾಳಿತು.

ಪುಷ್ಪ ಕಮಲ್‌ ಅವರು ಏಳು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರು. ಆದರೆ ಮಿತ್ರಪಕ್ಷಗಳಾದ ಸಿಪಿಎನ್‌–ಯುಎಂಎಲ್‌, ಆರ್‌ಪಿಪಿ ಬೆಂಬಲ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ವಿಶ್ವಾಸಮತ ಕೋರಲು ನಿರ್ಧರಿಸಿದ್ದರು.

ಕಳೆದ ಡಿಸೆಂಬರ್‌ನಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಪ್ರಚಂಡ ಅವರು ಮೊದಲಿಗೆ ಜ.10ರಂದು ವಿಶ್ವಾಸಮತ ಯಾಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.