
ಕಠ್ಮಂಡು: ನೇಪಾಳದಲ್ಲಿ ಸರ್ಕಾರದ ವಿರುದ್ಧ ಆರಂಭವಾಗಿರುವ ಪ್ರತಿಭಟನೆಯಿಂದಾಗಿ ಸಂಭವಿಸುತ್ತಿರುವ ಹಿಂಸಾಕೃತ್ಯಗಳು ಇನ್ನೂ ನಿಂತಿಲ್ಲ. ದೇಶದ ಕಾರಾಗೃಹವೊಂದರಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಗುರುವಾರ ನಡೆದ ಘರ್ಷಣೆಯಲ್ಲಿ ಮೂವರು ಕೈದಿಗಳು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜೈಲುಗಳಿಂದ 15 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ.
ಮಂಗಳವಾರ ದೇಶದಾದ್ಯಂತ ಕಂಡುಬಂದ ಸರ್ಕಾರ ವಿರೋಧಿ ಪ್ರತಿಭಟನೆಗಳ ನಂತರ ಜೈಲು ಸಿಬ್ಬಂದಿಯೊಂದಿಗೆ ನಡೆದ ಘರ್ಷಣೆಗಳಲ್ಲಿ ಮೃತಪಟ್ಟ ಕೈದಿಗಳ ಸಂಖ್ಯೆ 8ಕ್ಕೆ ಏರಿದಂತಾಗಿದೆ.
ಮಾಧೇಶ ಪ್ರಾಂತ್ಯದ ರಾಮೇಛಾಪ್ ಜಿಲ್ಲೆಯ ಜೈಲಿನಲ್ಲಿ ಭದ್ರತಾ ಸಿಬ್ಬಂದಿ ಜೊತೆ ನಡೆದ ಘರ್ಷಣೆಗಳಲ್ಲಿ ಮೂವರು ಕೈದಿಗಳು ಮೃತಪಟ್ಟಿದ್ದು, ಇತರ 13 ಕೈದಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಅನಿಲ ಸಿಲಿಂಡರ್ ಬಳಸಿ ಜೈಲಿನ ಒಂದು ಭಾಗವನ್ನು ಸ್ಫೋಟಿಸಲು ಕೈದಿಗಳು ಯತ್ನಿಸಿದ್ದಾರೆ. ಈ ವೇಳೆ, ಕಂಡುಬಂದ ಗಲಾಟೆ ನಿಯಂತ್ರಿಸಲು ಮುಂದಾದ ಪೊಲೀಸರು ಗುಂಡು ಹಾರಿಸಿದಾಗ ಮೂವರು ಕೈದಿಗಳು ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಗಂಡಕಿ ಪ್ರಾಂತ್ಯದ ಕಸ್ಕಿ ಜಿಲ್ಲೆಯ ಜೈಲಿನಿಂದ 773 ಕೈದಿಗಳು ಪರಾರಿಯಾಗಿದ್ದಾರೆ. ಪರಾರಿಯಾದವರಲ್ಲಿ 13 ಮಂದಿ ಭಾರತೀಯ ಪ್ರಜೆಗಳು ಹಾಗೂ ಇತರ ದೇಶಗಳ ನಾಲ್ವರು ಪ್ರಜೆಗಳು ಸೇರಿದ್ದಾರೆ ಎಂದು ಜೈಲರ್ ರಾಜೇಂದ್ರ ಶರ್ಮಾ ತಿಳಿಸಿದ್ದಾರೆ.
ಗಡಿ ದಾಟಿ, ಭಾರತ ಪ್ರವೇಶಿಸಲು ಯತ್ನಿಸುತ್ತಿದ್ದ 13 ಕೈದಿಗಳನ್ನು ಬೈರಗಾನಿಯಾ ಚೆಕ್‌ಪೋಸ್ಟ್‌ನಲ್ಲಿ ಭಾರತದ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ) ಯೋಧರು ಬಂಧಿಸಿದ್ದಾರೆ ಎಂದು ನೇಪಾಳ ಪೊಲೀಸರು ಹೇಳಿದ್ದಾರೆ.
‘ಬಂಧಿಸಲಾಗಿರುವ ಎಲ್ಲ ಕೈದಿಗಳನ್ನು ನೇಪಾಳ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ’ ಎಂದು ಎಸ್‌ಎಸ್‌ಬಿ ಮೂಲಗಳು ತಿಳಿಸಿವೆ.
ಕಠ್ಮಂಡು ವ್ಯಾಲಿ ಸೆಂಟ್ರಲ್ ಜೈಲಿನಿಂದ ಗರಿಷ್ಠ 3,300 ಕೈದಿಗಳು
ಪರಾರಿಯಾಗಿದ್ದಾರೆ
ಪರಾರಿದವರ ಪೈಕಿ ಬೆರಳಣಿಕೆಯಷ್ಟು ಕೈದಿಗಳು ಮಾತ್ರ ಜೈಲುಗಳಿಗೆ ಮರಳಿದ್ದಾರೆ
ಘರ್ಷಣೆ ವೇಳೆ ಗಾಯಗೊಂಡಿರುವ ಕೈದಿಗಳನ್ನು ರಾಮೇಛಾಪ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ
ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 291 ಕೈದಿಗಳ ಪೈಕಿ 260 ಕೈದಿಗಳು ಪರಾರಿಯಾಗಿದ್ದಾರೆ. ಇವರ ಪೈಕಿ 31 ಕೈದಿಗಳನ್ನು ಮತ್ತೆ ಬಂಧಿಸಿ, ಜೈಲಿಗೆ ಅಟ್ಟಲಾಗಿದೆ
ದೇಶದ ವಿವಿಧೆಡೆ ನಡೆದ ಪ್ರತಿಭಟನೆಗಳಲ್ಲಿ 1,061 ಜನರು ಗಾಯಗೊಂಡಿದ್ದಾರೆ. ಈ ಪೈಕಿ 274 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ
ನಿಷೇಧಾಜ್ಞೆ ತುಸು ಸಡಿಲ
‘ಜೆನ್–ಝಿ’ ಯುವ ಸಮುದಾಯದ ಪ್ರತಿಭಟನೆಯಿಂದಾಗಿ ನಡೆದ ಹಿಂಸಾಚಾರದಿಂದ ನಲುಗಿದ್ದ ನೇಪಾಳದಲ್ಲಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಈ ನಡುವೆ, ಆಯ್ದ ಪ್ರದೇಶಗಳಲ್ಲಿ ನಿರ್ದಿಷ್ಟ ಅವಧಿಗೆ ಜನರ ಸಂಚಾರಕ್ಕೆ ಸೇನೆ ಗುರುವಾರ ಅವಕಾಶ ಕಲ್ಪಿಸಿತ್ತು.
ಕಠ್ಮಂಡು ಕಣಿವೆಯ ಜಿಲ್ಲೆಗಳಾದ ಕಠ್ಮಂಡು, ಲಲಿತಪುರ ಹಾಗೂ ಭಕ್ತಪುರದಲ್ಲಿ ಬೆಳಿಗ್ಗೆ 6 ರಿಂದ ಕೆಲ ಗಂಟೆ ನಿಷೇಧಾಜ್ಞೆ ತೆರವುಗೊಳಿಸ ಲಾಗಿತ್ತು. ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅನುಕೂಲವಾಗಲು ಈ ಕ್ರಮ ಕೈಗೊಳ್ಳಲಾಗಿತ್ತು.
ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ನಿರ್ಬಂಧ ಆದೇಶ ಜಾರಿಗೊಳಿ ಸಲಾಗಿತ್ತು. ನಂತರ, ಸಂಜೆ 5ರಿಂದ ರಾತ್ರಿ 7ರ ವರೆಗೆ ನಿರ್ಬಂಧ ಸಡಿಲಿಸಿದ್ದ ಸೇನೆ, ಪುನಃ ರಾತ್ರಿ 7ರಿಂದ ಶುಕ್ರವಾರ ಬೆಳಿಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿತ್ತು. ನಗರದ ಎಲ್ಲೆಡೆ ಯೋಧರನ್ನು ನಿಯೋಜನೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.