
ಕಠ್ಮಂಡುವಿನಲ್ಲಿ ಪ್ರತಿಭಟನಕಾರರು ಸಂಸತ್ ಭವನಕ್ಕೆ ನುಗ್ಗಿ, ಕಟ್ಟಡಕ್ಕೆ ಬೆಂಕಿ ಹಚ್ಚಿದ ನಂತರ ಹೊಗೆ ದಟ್ಟೈಸಿತ್ತು
ಪಿಟಿಐ ಚಿತ್ರ
ಕಠ್ಮಂಡು: ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ಕ್ರಮ ವಿರೋಧಿಸಿ ಹಾಗೂ ಭ್ರಷ್ಟಾಚಾರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
‘ಪೊಲೀಸರು ಕೈಗೊಂಡ ಕ್ರಮದಿಂದಾಗಿ ಸೋಮವಾರ 19 ಪ್ರತಿ ಭಟನಕಾರರು ಮೃತಪಟ್ಟ ಕಾರಣಕ್ಕೆ ಓಲಿ ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಸಾವಿರಾರು ಪ್ರತಿಭಟನಕಾರರು ಅವರ ನಿವಾಸಕ್ಕೆ ನುಗ್ಗಿ, ಘೋಷಣೆಗಳನ್ನೂ ಹಾಕಿದರು. ಇದಾದ ಸ್ವಲ್ಪ ಹೊತ್ತಿನ ಬಳಿಕ ಓಲಿ ಅವರು ತಮ್ಮ ರಾಜೀನಾಮೆ ಘೋಷಿಸಿದರು.
ಪ್ರಧಾನಿ ಓಲಿ ಅವರು ರಾಜೀನಾಮೆ ನೀಡುವುದಕ್ಕೂ ಮುನ್ನ, ಬಾಲ್ಕೋಟ್‌ನಲ್ಲಿರುವ ಅವರ ಖಾಸಗಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಕಾರರು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನಿಷೇಧಾಜ್ಞೆ ಉಲ್ಲಂಘಿಸಿ, ಭಾರಿ ಭದ್ರತೆ ಏರ್ಪಡಿಸಿದ್ದ ಭದ್ರತಾ ಪಡೆಗಳ ಬೇಲಿಯನ್ನು ಭೇದಿಸಿದ ಪ್ರತಿಭಟನಕಾರರು, ಪ್ರಮುಖ ರಾಜಕಾರಣಿಗಳ ಮನೆಗಳು, ರಾಜಕೀಯ ಪಕ್ಷಗಳ ಕಚೇರಿಗಳು ಸೇರಿ ವಿವಿಧ ಕಟ್ಟಡಗಳಿಗೆ ಬೆಂಕಿ ಹಚ್ಚಿದರು. ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್, ಸಂವಹನ ಸಚಿವ ಪೃಥ್ವಿ ಸುಬ್ಬ ಗುರುಂಗ, ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರ ಮನೆಗಳನ್ನು ಧ್ವಂಸ ಮಾಡಿದರು.
ಗುರುಂಗ ಅವರು ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ ಆದೇಶಿಸಿದ್ದರು. ಕಾನೂನುರೀತ್ಯ, ನೋಂದಣಿ ಮಾಡಿಸುವಲ್ಲಿ ವಿಫಲವಾಗಿದ್ದಕ್ಕಾಗಿ ಫೇಸ್‌ಬುಕ್, ಎಕ್ಸ್ ಸೇರಿ 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ ಸರ್ಕಾರ ಆದೇಶಿಸಿತ್ತು.
ಅಧ್ಯಕ್ಷ ಪೌದೆಲ್ ಅವರ ಖಾಸಗಿ ನಿವಾಸದ ಮೇಲೂ ಪ್ರತಿಭಟನಕಾರರು ದಾಳಿ ನಡೆಸಿದರು.
‘ದೇಶವು ಅಸಾಧಾರಣ ಸನ್ನಿವೇಶಗಳನ್ನು ಎದುರಿಸುತ್ತಿದೆ. ಪ್ರಸಕ್ತ ಸನ್ನಿವೇಶ ಹಿನ್ನೆಲೆಯಲ್ಲಿ ಸಾಂವಿಧಾನಿಕ ಮತ್ತು ರಾಜಕೀಯ ನಿರ್ಧಾರವೊಂದನ್ನು ತೆಗೆದುಕೊಳ್ಳುವುದಕ್ಕಾಗಿ ದಾರಿ ಮಾಡಿ ಕೊಡುವ ಉದ್ದೇಶದಿಂದ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು ಅಧ್ಯಕ್ಷ ರಾಮಚಂದ್ರ ಪೌದೆಲ್ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ಕ್ರಮ ವಿರೋಧಿಸಿ ಹಾಗೂ ಭ್ರಷ್ಟಾಚಾರ ತಡೆಯಬೇಕು ಎಂದು ಆಗ್ರಹಿಸಿ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ‘ಜೆನ್–ಝಿ’ ಯುವ ಜನತೆ ನೇತೃತ್ವದಲ್ಲಿ ಸೋಮವಾರ ಭಾರಿ ಪ್ರತಿಭಟನೆ ನಡೆದಿತ್ತು. ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ಉತ್ತರದಾಯಿತ್ವ ನಿಗದಿ ಮಾಡಬೇಕು ಎಂದೂ ಒತ್ತಾಯಿಸಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತಲ್ಲದೇ, 19 ಜನರು ಮೃತಪಟ್ಟಿದ್ದರು. ಇದರ ಬೆನ್ನಲ್ಲೆ, ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ಸರ್ಕಾರ ಹಿಂಪಡೆದಿತ್ತು.
ಆಗ್ರಹ: ‘ಪಕ್ಷವು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಕೂಡಲೇ ಹಿಂತೆಗೆದುಕೊಂಡು, ನೂತನ ಸರ್ಕಾರ ರಚಿಸಲು ಕ್ರಮ ಕೈಗೊಳ್ಳಬೇಕು. ಪ್ರತಿಭಟನೆ ನಡೆಸುತ್ತಿರುವ ಜೆನ್–ಝಿ ಗುಂಪಿನೊಂದಿಗೆ ಕೂಡಲೇ ಮಾತುಕತೆ ಆರಂಭಿಸಬೇಕು’ ಎಂದು ನೇಪಾಳಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ವಿಮಲೇಂದ್ರ ನಿಧಿ ಹಾಗೂ ಅರ್ಜುನ್ ನರಸಿಂಗ್ ಕೇಸಿ ಒತ್ತಾಯಿಸಿದ್ದರು.
ಸಂಯಮಕ್ಕೆ ಸೇನೆ ಮನವಿ: ‘ದೇಶದಲ್ಲಿ ಸ್ಥಿರತೆ ಮತ್ತು ಕಾನೂನು ಸುವ್ಯವಸ್ಥೆ ಮರುಮರುಸ್ಥಾಪಿಸಲು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವುದೇ ನಮ್ಮ ಮುಂದಿರುವ ಏಕೈಕ ಮಾರ್ಗ. ಜನರು ಸಂಯಮ ಕಾಪಾಡಿಕೊಳ್ಳಬೇಕು, ಜನರ ಜೀವ ಮತ್ತು ಸ್ವತ್ತುಗಳಿಗೆ ಮತ್ತಷ್ಟು ಹಾನಿ ಮಾಡುವುದನ್ನು ನಿಲ್ಲಿಸಬೇಕು’ ಎಂದು ನೇಪಾಳಿ ಸೇನೆ ಹಾಗೂ ವಿವಿಧ ಭದ್ರತಾ ಪಡೆಗಳು ಮನವಿ ಮಾಡಿವೆ.
ಈ ಕುರಿತು ಅವು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಸೇನೆ ಮುಖ್ಯಸ್ಥ ಅಶೋಕರಾಜ್ ಸಿಗ್ಡೆಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಏಕನಾರಾಯಣ ಆರ್ಯಲ್, ಗೃಹ ಕಾರ್ಯದರ್ಶಿ ಗೋಕರ್ಣ ಡಿ. ಹಾಗೂ ಇತರರು ಈ ಹೇಳಿಕೆಗೆ ಸಹಿ ಹಾಕಿದ್ದಾರೆ.
‘ಸಂಸತ್ ಭವನಕ್ಕೆ ಬೆಂಕಿ’
‘ಪ್ರತಿಭಟನಕಾರರು ಸಂಸತ್ ಭವನಕ್ಕೆ ನುಗ್ಗಿ, ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸರ್ಕಾರ ವಿರೋಧಿ ಪ್ರತಿಭಟನೆ ಬಳಿಕ ಓಲಿ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ಸಚಿವಾಲಯದ ವಕ್ತಾರ ಏಕರಾಮ್ ಗಿರಿ ಹೇಳಿದ್ದಾರೆ.
‘ನೂರಾರು ಪ್ರತಿಭಟನಕಾರರು ಸಂಸತ್ ಪ್ರವೇಶದೊಳಗೆ ನುಗ್ಗಿದರಲ್ಲದೇ, ಮುಖ್ಯ ಕಟ್ಟಡಕ್ಕೆ ಬೆಂಕಿ ಹಚ್ಚಿದರು’ ಎಂದು ಗಿರಿ ತಿಳಿಸಿದ್ದಾರೆ.
ಬೇಡಿಕೆಗಳೇನು?
ರಾಷ್ಟ್ರೀಯ ಸರ್ಕಾರ ರಚಿಸಬೇಕು
ಭ್ರಷ್ಟ ರಾಜಕಾರಣಿಗಳ ವಿರುದ್ಧ ಕ್ರಮ ಜರುಗಿಸಬೇಕು
ಅಭಿವ್ಯಕ್ತಿ ಸ್ವಾತಂತ್ರ್ಯ ಖಾತ್ರಿಪಡಿಸಬೇಕು
ರಾಜಕೀಯ ಹುದ್ದೆಗಳಲ್ಲಿ ಇರುವವರಿಗೂ ನಿವೃತ್ತಿ ವಯಸ್ಸು ನಿಗದಿ ಮಾಡಿ, ಜಾರಿಗೊಳಿಸಬೇಕು
ಪ್ರಮುಖ ಅಂಶಗಳು
ಕಠ್ಮಂಡುವಿನ ಬಾನೇಶ್ವರ, ಕಲಂಕಿ, ಕಲಿಮತಿ, ತಹಚಾಲ್, ಲಲಿತ್‌ಪುರ ಜಿಲ್ಲೆಯ ಚಪಗೌ, ಚ್ಯಾಸಲ್ ಮ್ತು ಥೇಚೊ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ‘ವಿದ್ಯಾರ್ಥಿಗಳನ್ನು ಕೊಲ್ಲಬೇಡಿ’ ಎಂಬ ಘೋಷಣೆಗಳನ್ನು ಕೂಗಿದರು
ಕಲಂಕಿಯಲ್ಲಿ ಟೈರುಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ರಸ್ತೆಗಳನ್ನು ಬಂದ್ ಮಾಡಿದರು
ಕಠ್ಮಂಡುವಿನಲ್ಲಿರುವ ಮಾಜಿ ಪ್ರಧಾನಿ ಶೇರ್ ಬಹಾದೂರ್ ದೇವುಬಾ ಅವರ ನಿವಾಸ ಧ್ವಂಸ
ಕಠ್ಮಂಡುವಿನ ತ್ರಿಭುವನ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನಗಳ ಸೇವೆ ಭಾಗಶಃ ರದ್ದು
ಸುಪ್ರೀಂ ಕೋರ್ಟ್ ಹಾಗೂ ಅಟಾರ್ನಿ ಜನರಲ್ ಕಚೇರಿಗಳಿರುವ ‘ಸಿಂಘ ದರ್ಬಾರ್’ ಕಟ್ಟಡಕ್ಕೂ ಬೆಂಕಿ ಹಚ್ಚಿದ ಪ್ರತಿಭಟನಕಾರರು
ಗಡಿಯಲ್ಲಿ ಭಾರಿ ಭದ್ರತೆ
ಬಲರಾಮಪುರ (ಉತ್ತರ ಪ್ರದೇಶ): ನೇಪಾಳದಲ್ಲಿನ ಅಸ್ಥಿರತೆ ಕಾರಣದಿಂದ ನೆರೆಯ ರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಉದ್ದಕ್ಕೂ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನೇಪಾಳವು ಭಾರತದೊಂದಿಗೆ 1,751 ಕಿ.ಮೀ ಗಡಿ ಹಂಚಿಕೊಂಡಿದ್ದು, ಇದಕ್ಕೆ ಯಾವುದೇ ಬೇಲಿ ಅಳವಡಿಸಲಾಗಿಲ್ಲ. ಈಗ, ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ) ಯೋಧರನ್ನು ಗಡಿಯಲ್ಲಿ ನಿಯೋಜಿಸಲಾಗಿದೆ.
‘ಎಸ್ಎಸ್‌ಬಿಯ 22 ಹೊರ ಠಾಣೆಗಳಲ್ಲಿ ಹೆಚ್ಚುವರಿ ಯೋಧರನ್ನು ನಿಯೋಜಿಸಲಾಗಿದೆ. ಗಡಿಗೆ ಹೊಂದಿಕೊಂಡಿರುವ
ಪ್ರದೇಶಗಳಲ್ಲಿನ ಐದು ಪೊಲೀಸ್ ಠಾಣೆಗಳ ಸಿಬ್ಬಂದಿ ಡ್ರೋನ್ ಬಳಸಿ, ಕಣ್ಗಾವಲು ಇರಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.