ADVERTISEMENT

ನೇಪಾಳ: ಸಿಪಿಎನ್‌– ಯುಎಂಎಲ್‌, ಎನ್‌ಸಿಪಿ (ಮಾವೋವಾದಿ ಕೇಂದ್ರ) ವಿಲೀನ ರದ್ದು

ಪಿಟಿಐ
Published 7 ಮಾರ್ಚ್ 2021, 15:19 IST
Last Updated 7 ಮಾರ್ಚ್ 2021, 15:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಠ್ಮಂಡು (ಪಿಟಿಐ): ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ ನೇತೃತ್ವದ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ನೇಪಾಳ (ಯುಎಂಎಲ್‌) ಮತ್ತು ಪುಷ್ಪಕಮಲ್‌ ದಹಾಲ್‌ ‘ಪ್ರಚಂಡ’ ನೇತೃತ್ವದ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ನೇಪಾಳ (ಮಾವೋವಾದಿ ಕೇಂದ್ರ) ವಿಲೀನವನ್ನು ನೇಪಾಳದ ಸುಪ್ರೀಂ ಕೋರ್ಟ್‌ ಭಾನುವಾರ ರದ್ದುಗೊಳಿಸಿದೆ.

2017ರ ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿಪಕ್ಷಗಳು ಗೆಲುವು ಸಾಧಿಸಿದ ಬೆನ್ನಲ್ಲೇ, ಸಿಪಿಎನ್‌– ಯುಎಂಎಲ್‌ ಹಾಗೂ ಸಿಪಿಎನ್‌ (ಮಾವೋವಾದಿ ಕೇಂದ್ರ) ವಿಲೀನಗೊಂಡು 2018ರ ಮೇನಲ್ಲಿ ನೇಪಾಳ ಕಮ್ಯುನಿಸ್ಟ್‌ ಪಕ್ಷವನ್ನು ರಚಿಸಲಾಗಿತ್ತು.

ಒಲಿ ಹಾಗೂ ಪ್ರಚಂಡ ನೇತೃತ್ವದ ಎನ್‌ಸಿಪಿ ಪಕ್ಷದ ರಚನೆಗೂ ಮುನ್ನವೇ ಚುನಾವಣಾ ಆಯೋಗದಲ್ಲಿ ನೇಪಾಳ ಕಮ್ಯುನಿಸ್ಟ್‌ ಪಕ್ಷದ ಹೆಸರು ನೊಂದಾಯಿಸಿದ ರಿಷಿರಾಮ್‌ ಕಟ್ಟೆಲ್‌ ಅವರ ಪರ ನ್ಯಾಯಾಲಯ ತೀರ್ಪು ನೀಡಿದೆ.

ADVERTISEMENT

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಕುಮಾರ್‌ ರೆಗ್ಮಿ ಹಾಗೂ ಬಾಮ್‌ಕುಮಾರ್‌ ಶ್ರೇಷ್ಠ ಅವರನ್ನೊಳಗೊಂಡ ಪೀಠವು ಭಾನುವಾರ ಈ ಬಗ್ಗೆ ತೀರ್ಪು ನೀಡಿದೆ.

ಕಟ್ಟೆಲ್‌ ಅವರು ಮೇ 2018ರಲ್ಲಿ ಒಲಿ ಹಾಗೂ ಪ್ರಚಂಡ ಅವರ ಹೆಸರಿನಲ್ಲಿ ನೇಪಾಳ ಕಮ್ಯುನಿಸ್ಟ್‌ ಪಕ್ಷ ನೋಂದಣಿ ಮಾಡಿದ ಚುನಾವಣಾ ಆಯೋಗದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

‘ಸುಪ್ರೀಂ ಕೋರ್ಟ್‌ ನಮ್ಮ ಪರ ತೀರ್ಪು ನೀಡಿದೆ’ ಎಂದು ಕಟ್ಟೆಲ್‌ ಅವರ ಪರ ವಕೀಲರು ತಿಳಿಸಿದ್ದಾರೆ.

ಈಗಾಗಲೇ ಅಸ್ತಿತ್ವದಲ್ಲಿರುವ ಪಕ್ಷದ ಹೆಸರಿನಲ್ಲಿ ಮತ್ತೊಂದು ಹೊಸ ಪಕ್ಷ ಅದೇ ಹೆಸರಿನಲ್ಲಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಸಿಪಿಎನ್‌–ಉಎಂಎಲ್‌ ಮತ್ತು ಸಿಪಿಎನ್‌ (ಮಾವೋವಾದಿ ಕೇಂದ್ರ) ವಿಲೀನಗೊಳ್ಳಬೇಕಾದರೆ ರಾಜಕೀಯ ಪಕ್ಷಗಳ ಕಾಯ್ದೆ ಅನ್ವಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.