ADVERTISEMENT

ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಂದ: ನೆತನ್ಯಾಹು

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 13:52 IST
Last Updated 17 ಜನವರಿ 2025, 13:52 IST
ಬೆಂಜಮಿನ್‌ ನೆತನ್ಯಾಹು
ಬೆಂಜಮಿನ್‌ ನೆತನ್ಯಾಹು   

ಜೆರುಸಲೇಂ: ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವವರ ಬಿಡುಗಡೆ ಮಾಡಲು ಒಪ್ಪಂದ ಆಗಿದೆ ಎಂದು ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಶುಕ್ರವಾರ ತಿಳಿಸಿದರು. 

ಇದರೊಂದಿಗೆ ಇಸ್ರೇಲ್‌–ಹಮಾಸ್‌ ನಡುವಿನ ಕದನ ವಿರಾಮ ಒಪ್ಪಂದಕ್ಕೆ ಕವಿದಿದ್ದ ಕಾರ್ಮೋಡ ಸರಿದಂತಾಗಿದೆ.

ಸಂಪುಟ ಸಭೆ ಕರೆದು ಚರ್ಚಿಸಿ, ನಂತರ ಬಾಕಿ ಇರುವ ಒಪ್ಪಂದಕ್ಕೆ ಸರ್ಕಾರವು ಅನುಮೋದನೆ ನೀಡಲಿದೆ ಎಂದು ಅವರು ಹೇಳಿದರು. 

ADVERTISEMENT

ಗಾಜಾದಿಂದ ಬರುವ ಒತ್ತೆಯಾಳುಗಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳುವಂತೆ ವಿಶೇಷ ಕಾರ್ಯಪಡೆಗೆ ಸೂಚಿಸಲಾಗಿದೆ. ಒಪ್ಪಂದದ ಬಗ್ಗೆ ಒತ್ತೆಯಾಳುಗಳ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ನೆತನ್ಯಾಹು ಅವರು ಮಾಹಿತಿ ನೀಡಿದರು.

ಒಪ್ಪಂದದ ಪ್ರಕಾರ, ಹಮಾಸ್‌ ಒತ್ತೆ ಇರಿಸಿಕೊಂಡಿರುವ 33 ಮಂದಿ ಬಿಡುಗಡೆಗೆ ಪ್ರತಿಯಾಗಿ, ಇಸ್ರೇಲ್‌ನ ಬಂಧನದಲ್ಲಿರುವ ನೂರಾರು ಪ್ಯಾಲೆಸ್ಟೀನಿಯರನ್ನು ಮುಂದಿನ ಆರು ವಾರಗಳಲ್ಲಿ ಬಿಡುಗಡೆ ಮಾಡಬೇಕಿದೆ.

ಜೊತೆಗೆ, ಈ ಒಪ್ಪಂದದಿಂದ ಸ್ಥಳಾಂತರಗೊಂಡ ಸಾವಿರಾರು ಜನರು ಗಾಜಾದಲ್ಲಿ ಅಳಿದುಳಿದ ತಮ್ಮ ಮನೆಗಳಿಗೆ ಪುನಃ ತೆರಳಲು ಸಾಧ್ಯವಾಗಲಿದೆ.

ಹಮಾಸ್ ಹಿಂದೆ ಸರಿಯುವವರೆಗೂ ಹೋರಾಟ– ಇಸ್ರೇಲ್‌:

ಇದಕ್ಕೂ ಮುನ್ನ, ಹಮಾಸ್ ತನ್ನ ಹೊಸ ಬೇಡಿಕೆಗಳನ್ನು ಕೈಬಿಡುವವರೆಗೆ ಗಾಜಾಪಟ್ಟಿಯಲ್ಲಿ ಕದನ ವಿರಾಮ ಘೋಷಿಸುವ ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದವನ್ನು ಅನುಮೋದಿಸಲು ಸಂಪುಟವು ಸಭೆ ಸೇರುವುದಿಲ್ಲ ಎಂದು ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ಗುರುವಾರ ತಿಳಿಸಿತ್ತು.

72 ಮಂದಿ ಸಾವು:

ಕದನ ವಿರಾಮ ಘೋಷಣೆಯಾದ ನಂತರ ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 72 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಜನರು  ಕದನ ವಿರಾಮ ಘೋಷಣೆ ಒಪ್ಪಂದದ ಸಂಭ್ರಮದಲ್ಲಿ ಇದ್ದಾಗಲೇ ಇಸ್ರೇಲ್‌  ಬಾಂಬ್‌ ದಾಳಿ ನಡೆಸಿದೆ ಎಂದು ಗಾಜಾದಲ್ಲಿನ ಪ್ಯಾಲೆಸ್ಟೀನಿಯನ್ನರು ತಿಳಿಸಿದ್ದಾರೆ.

ಬೆಂಬಲ ವಾಪಸ್‌:

ನೆತನ್ಯಾಹು ಅವರ ಸರ್ಕಾರವು ಕದನ ವಿರಾಮ ಒಪ್ಪಂದಕ್ಕೆ ಅನುಮೋದನೆ ನೀಡಿದರೆ ಇಸ್ರೇಲ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಬಲಪಂಥೀಯ ನಾಯಕ, ರಾಷ್ಟ್ರೀಯ ಭದ್ರತಾ ಸಚಿವ ಇಟಮಾನ್‌ ಬೆನ್ ಗಿವಿಯರ್‌ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಯುದ್ಧವನ್ನು ಮುಂದುವರಿಸಿದರೆ ತಮ್ಮ ಪಕ್ಷವು ಸರ್ಕಾರದ ಜತೆ ಮತ್ತೆ ಸೇರಲಿದೆ ಎಂದು ಹೇಳಿದ್ದಾರೆ.

ಬ್ಲಿಂಕನ್ ವಿಶ್ವಾಸ

ನಿರೀಕ್ಷೆಯಂತೆ ಭಾನುವಾರದಿಂದ ಕದನ ವಿರಾಮ ಒಪ್ಪಂದ ಜಾರಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ತಿಳಿಸಿದ್ದಾರೆ. ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದವು ಈ ಪ್ರದೇಶಕ್ಕೆ ‘ಸಂಭವನೀಯ ಐತಿಹಾಸಿಕ ಕ್ಷಣ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.