
ವಾಷಿಂಗ್ಟನ್: ವಿವಿಧ ದೇಶಗಳಿಂದ ಅಮೆರಿಕ ಆಮದು ಮಾಡಿಕೊಳ್ಳುವ ಸರಕುಗಳಿಗೆ ಸಂಬಂಧಿಸಿ ಹೊಸದಾಗಿ ಘೋಷಿಸಿರುವ ಶೇ10ರಷ್ಟು ಪ್ರತಿಸುಂಕಗಳು ಮಂಗಳವಾರದಿಂದ ಜಾರಿಗೊಂಡಿವೆ.
ಶೇ10ರಷ್ಟು ಪ್ರತಿಸುಂಕ ನಿರ್ದಿಷ್ಟ ವಲಯಗಳ ಸರಕುಗಳಿಗೆ ಅನ್ವಯವಾಗಲಿದೆ. ಇದನ್ನು ವಿಸ್ತರಿಸಲು ಸಂಸತ್ ನಿರ್ಧರಿಸದಿದ್ದಲ್ಲಿ, ಈ ಪ್ರತಿಸುಂಕವು 150 ದಿನವರೆಗೆ ಜಾರಿಯಲ್ಲಿರಲಿದೆ ಎಂದು ಶ್ವೇತಭವನ ಪ್ರಕಟಣೆ ತಿಳಿಸಿದೆ.
‘ಬಾಕಿ ವೇತನ ಪಾವತಿಗೆ ಭಾರಿ ಮೊತ್ತದ ಅಗತ್ಯವಿದೆ. ಈ ಕೊರತೆಯನ್ನು ಸರಿದೂಗಿಸಲು ಶೇ10ರಷ್ಟು ಪ್ರತಿಸುಂಕವನ್ನು ವಿಧಿಸಲಾಗುತ್ತದೆ’ ಎಂದು ಶ್ವೇತಭವನ ತಿಳಿಸಿದೆ.
ಜಗತ್ತಿನ ವಿವಿಧ ರಾಷ್ಟ್ರಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಪ್ರತಿಸುಂಕಗಳನ್ನು ರದ್ದು ಮಾಡಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ತೀರ್ಪಿನ ಬಳಿಕ ಪ್ರತಿಸುಂಕ ಶೇ10ಕ್ಕೆ ಇಳಿಕೆಯಾಗಿತ್ತು. ಮತ್ತೊಂದೆಡೆ, ಕೆಲ ದೇಶಗಳಿಗೆ ಸಂಬಂಧಿಸಿ ಪ್ರತಿಸುಂಕವನ್ನು ಶೇ15ಕ್ಕೆ ಹೆಚ್ಚಿಸುವ ಇಂಗಿತವನ್ನು ಕೂಡ ಟ್ರಂಪ್ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಆದೇಶ ಹೊರಬಿದ್ದಿಲ್ಲ.
‘ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಸುಂಕಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಂಗಳವಾರದಿಂದ ಸ್ಥಗಿತಗೊಳಿಸಲಾಗುವುದು. ಮಂಗಳವಾರದಿಂದ ಹೊಸದಾಗಿ ಜಾರಿಗೆ ಬಂದಿರುವ ಶೇ10ರಷ್ಟು ಸುಂಕ ಸಂಗ್ರಹ ಆರಂಭಿಸಲಾಗುವುದು’ ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ಭದ್ರತಾ ಇಲಾಖೆ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.