ಮೃತರನ್ನು ಸ್ಪೇನ್ ಮೂಲದ ಖ್ಯಾತ ಎಂಎನ್‌ಸಿ ಕಂಪನಿ Siemens ನ ಸಿಇಒ ಆಗಸ್ಟಿನ್ ಎಸ್ಕೊಬಾರ್ ಹಾಗೂ ಅವರ ಕುಟುಂಬ ಎಂದು ಗುರುತಿಸಲಾಗಿದೆ.
ನ್ಯೂಯಾರ್ಕ್: ಪ್ರವಾಸಿ ಹೆಲಿಕಾಪ್ಟರ್ ಬೆಲ್ 206 ಪತನಗೊಂಡು ನ್ಯೂಯಾರ್ಕ್ ನಗರದ ಹಡ್ಸನ್ ನದಿಗೆ ಬಿದ್ದಿದ್ದ ಪ್ರಕರಣದಲ್ಲಿ ಮೃತರ ಗುರುತು ಪತ್ತೆಯಾಗಿದೆ.
ಮೃತರನ್ನು ಸ್ಪೇನ್ ಮೂಲದ ಖ್ಯಾತ ಎಂಎನ್‌ಸಿ ಕಂಪನಿ Siemens ನ ಸಿಇಒ ಆಗಸ್ಟಿನ್ ಎಸ್ಕೊಬಾರ್ ಅವರ ಪತ್ನಿ ಮರ್ಕ್ಯೂರ್ ಚಾಂಪ್ರುಬಿ ಮಾಂಟಲ್, ಕ್ರಮವಾಗಿ 4, 5, 11 ವರ್ಷ ವಯಸ್ಸಿನ ಮೂವರು ಮಕ್ಕಳು ಎಂದು ಗುರುತಿಸಲಾಗಿದೆ. ಪೈಲಟ್ ಸಹ ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ ಒಟ್ಟು ಎಲ್ಲ ಆರು ಜನ ಮೃತಪಪಟ್ಟಿದ್ದಾರೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ.
ಆಗಸ್ಟಿನ್ ಎಸ್ಕೊಬಾರ್ ಅವರು ಸ್ಪೇನ್‌ನ ಬಾರ್ಸಿಲೋನಾ ಮೂಲದವರು. ಉತ್ತರ ಅಮೆರಿಕದಲ್ಲಿ ಕಂಪನಿ ಕಟ್ಟಿ ಬೆಳೆಸಿದ್ದ ಅವರನ್ನು 2018 ರಲ್ಲಿ ಕಂಪನಿ ಸಿಇಒ ಆಗಿ ನೇಮಿಸಲಾಗಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಆಗಸ್ಟಿನ್ ಎಸ್ಕೊಬಾರ್ ಅವರು ಕುಟಂಬ ಸಮೇತ ನ್ಯೂಯಾರ್ಕ್‌ನ ಪ್ರಸಿದ್ಧ ತಾಣಗಳನ್ನು ಹೆಲಿಕಾಪ್ಟರ್‌ನಲ್ಲಿ ವೀಕ್ಷಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಅಪಘಾತಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ತಾಣದಲ್ಲಿ ಹರಿದಾಡಿವೆ. ವಿಡಿಯೊದಲ್ಲಿ ದೊಡ್ಡ ವಸ್ತುವೊಂದು ನದಿಗೆ ಬೀಳುತ್ತಿರುವಂತೆ ಕಂಡುಬಂದಿದೆ. ಕೆಲವು ಸೆಕೆಂಡುಗಳ ನಂತರ ಹೆಲಿಕಾಪ್ಟರ್‌ನ ಬ್ಲೇಡ್ ಕಾಣಿಸಿಕೊಂಡಿದ್ದವು.
ಮ್ಯಾನ್‌ಹಟನ್ ಸುತ್ತಮುತ್ತಲಿನ ವಾಯುಪ್ರದೇಶವು ಹೆಲಿಕಾಪ್ಟರ್‌ಗಳಿಂದ ತುಂಬಿದ್ದು, ಪ್ರವಾಸಿಗರಿಗೆ ಆಗಸದಿಂದ ನದಿ, ಸುತ್ತಲಿನ ಪ್ರದೇಶದ ಪಕ್ಷಿನೋಟವನ್ನು ಕಣ್ತುಂಬಿಸಿಕೊಳ್ಳುವ ಸೇವೆ ಒದಗಿಸುತ್ತಿವೆ.
ಫೆಡರಲ್ ವಿಮಾನಯಾನ ಆಡಳಿತ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಅಪಘಾತದ ಬಗ್ಗೆ ತನಿಖೆ ನಡೆಸಲಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.