ADVERTISEMENT

ನ್ಯೂಜಿಲೆಂಡ್‌: ಕಿವಿ ಪಕ್ಷಿ ಉಳಿವಿಗೆ ಹೊಸ ಪ್ರಾಜೆಕ್ಟ್‌ ಜಾರಿ

ಎಎಫ್‌ಪಿ
Published 29 ಏಪ್ರಿಲ್ 2023, 14:58 IST
Last Updated 29 ಏಪ್ರಿಲ್ 2023, 14:58 IST
ವೆಲಿಂಗ್ಟನ್‌ನ ಥಾವಾ ಬೆಟ್ಟ ಪ್ರದೇಶಕ್ಕೆ ಬಿಟ್ಟಿರುವ ಕಿವಿ ಪಕ್ಷಿ
ವೆಲಿಂಗ್ಟನ್‌ನ ಥಾವಾ ಬೆಟ್ಟ ಪ್ರದೇಶಕ್ಕೆ ಬಿಟ್ಟಿರುವ ಕಿವಿ ಪಕ್ಷಿ   

ವೆಲಿಂಗ್ಟನ್‌: ‘ಕಿವಿ’ ನ್ಯೂಜಿಲೆಂಡ್‌ನ ರಾಷ್ಟ್ರೀಯ ಪಕ್ಷಿ. ಹಾರಲಾಗದ ಇದಕ್ಕೆ ಬಾಲವಿಲ್ಲ. ಪಕ್ಷಿ ಸಂಕುಲದಲ್ಲಿಯೇ ಅಪರೂಪವಾಗಿರುವ ವಾಸನೆ ಗ್ರಹಣ ಶಕ್ತಿ ಇದಕ್ಕಿದೆ. ಇದರ ಸಹಾಯದಿಂದಲೇ ಇದು ಅರಣ್ಯದ ತರಗೆಲೆಗಳ ನಡುವೆ ಇರುವ ಹುಳುಹುಪ್ಪಟೆಗಳನ್ನು ಹೆಕ್ಕಿ ತಿನ್ನುತ್ತದೆ.

ಆದರೆ, ರಾಜಧಾನಿ ವೆಲಿಂಗ್ಟನ್‌ನ ಬೆಟ್ಟಗುಡ್ಡಗಳಲ್ಲಿ ಇದರ ಹೆಜ್ಜೆ ಸಪ್ಪಳ ಕೇಳಿ ಒಂದು ಶತಮಾನ ಕಳೆದಿದೆಯಂತೆ. ಹಾಗಾಗಿಯೇ, ಅಲ್ಲಿನ ಸರ್ಕಾರ ‘ದಿ ಕ್ಯಾಪಿಟಲ್‌ ಕಿವಿ ಪ್ರಾಜೆಕ್ಟ್‌’ ಮೂಲಕ ರಾಜಧಾನಿಯ ಸುತ್ತಮುತ್ತ ಮತ್ತೆ ಅವುಗಳಿಗೆ ಆವಾಸ ಕಲ್ಪಿಸಲು ಮುಂದಾಗಿದೆ.

ಅಲ್ಲಿನ ಸಂರಕ್ಷಣಾ ವಿಭಾಗದ ಮಾಹಿತಿ ಅನ್ವಯ ನ್ಯೂಜಿಲೆಂಡ್‌ನಲ್ಲಿ ಈಗ 70 ಸಾವಿರ ಕಿವಿ ಪಕ್ಷಿಗಳಷ್ಟೇ ಉಳಿದಿವೆ. ರಾಷ್ಟ್ರೀಯ ಸಂಕೇತವಾದ ಇವುಗಳ ಸಂರಕ್ಷಣೆಗೆ ದೇಶದಾದ್ಯಂತ 90ಕ್ಕೂ ಹೆಚ್ಚು ಸಮುದಾಯ ಆಧಾರಿತ ಕಾರ್ಯಕ್ರಮ ರೂಪಿಸಲಾಗಿದೆ. ಈ ಯೋಜನೆಗೆ ಸರ್ಕಾರ ಲಕ್ಷಾಂತರ ಡಾಲರ್ ಆರ್ಥಿಕ ನೆರವು ನೀಡಿದೆ. ಖಾಸಗಿ ವ್ಯಕ್ತಿಗಳು ಕೂಡ ಉದಾರವಾಗಿ ದೇಣಿಗೆ ನೀಡಿದ್ದಾರೆ.

ADVERTISEMENT

‘ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಕಿವಿ ಪಕ್ಷಿಯೊಂದಿಗೆ ಅವಿನಾಭಾವ ನಂಟು ಹೊಂದಿರುತ್ತಾರೆ. ದೇಶದ ದಂತಕಥೆಗಳು ಈ ಪಕ್ಷಿಯ ಸುತ್ತಲೇ ಹೆಣೆದುಕೊಂಡಿವೆ. ಕ್ರೀಡಾ ತಂಡಗಳು, ರಕ್ಷಣಾ ಪಡೆಗಳಲ್ಲಿ ಕಿವಿಯ ಚಿತ್ರವೇ ಲಾಂಛನವಾಗಿದೆ. ನಮ್ಮನ್ನು ‘ಕಿವೀಸ್‌’ ಎಂದೇ ಗುರುತಿಸುತ್ತಾರೆ. ಹಾಗಾಗಿ, ಅವುಗಳ ಸುಸ್ಥಿರ ಸಂರಕ್ಷಣೆಗೆ ಯೋಜನೆ ರೂಪಿಸಲಾಗಿದೆ’ ಎಂದು ಕಿವಿ ಪ್ರಾಜೆಕ್ಟ್‌ನ ಮುಖ್ಯಸ್ಥ ‍ಪೌಲ್‌ ವಾರ್ಡ್‌ ಹೇಳಿದ್ದಾರೆ.

ಸಾಕು ಪ್ರಾಣಿಗಳು ಮತ್ತು ಸ್ಥಳೀಯವಾಗಿ ಹೆಚ್ಚಿರುವ ನೀರುನಾಯಿ ಜಾತಿಗೆ ಸೇರಿದ ‘ಸ್ಟೋರ್ಟ್‌’ ಹೆಸರಿನ ಪ್ರಾಣಿಗಳೇ ಕಿವಿ ಸಂಕುಲದ ಮೊದಲ ಶತ್ರುಗಳು. ಅವುಗಳ ಹತೋಟಿಗೆ ಯೋಜನೆಯಡಿ ಮೊದಲ ಆದ್ಯತೆ ನೀಡಲಾಗಿದೆ. ಸ್ಟೋರ್ಟ್‌ಗಳ ಸೆರೆಗೆ ವೆಲಿಂಗ್ಟನ್‌ ವ್ಯಾಪ್ತಿಯಲ್ಲಿ 4,500 ಪಂಜರಗಳನ್ನು ಇಡಲಾಗಿದೆ. ಇಲ್ಲಿಯವರೆಗೂ ಒಂದು ಸಾವಿರಕ್ಕೂ ಹೆಚ್ಚು ಪ್ರಾಣಿಗಳನ್ನು ಸೆರೆ ಹಿಡಿಯಲಾಗಿದೆ. ಸ್ಥಳೀಯ ಸಾಕು ನಾಯಿಗಳ ಮಾಲೀಕರ ಸಭೆ ಕರೆದು ತಿಳಿವಳಿಕೆ ಮೂಡಿಸಲಾಗಿದೆ ಎಂದು ವಿವರಿಸಿದ್ದಾರೆ.

‘ವಯಸ್ಕ ಕಿವಿ ಪಕ್ಷಿಯು ತನ್ನ ಬಲವಾದ ಕಾಲುಗಳು ಮತ್ತು ಉಗುರುಗಳಿಂದ ಶತ್ರು ಪ್ರಾಣಿಗಳ ವಿರುದ್ಧ ಹೋರಾಡುತ್ತದೆ. ಆದರೆ, ಮರಿಗಳಿಗೆ ಆ ಶಕ್ತಿ ಇರುವುದಿಲ್ಲ. ಅವು ಅಸುನೀಗಿದರೆ ಇಡೀ ಕಿವಿ ಸಂಕುಲವೇ ನಾಶವಾಗುತ್ತದೆ’ ಎಂದು ಹೇಳಿದ್ದಾರೆ.

ಕಳೆದ ನವೆಂಬರ್‌ನಲ್ಲಿ ವೆಲಿಂಗ್ಟನ್‌ ಬೆಟ್ಟ ಪ್ರದೇಶದಲ್ಲಿ ಒಂದು ಕಿವಿ ಪಕ್ಷಿಯನ್ನು ಬಿಡಲಾಗಿದೆ. ಈಗ ಅದರ ದೇಹದ ಗಾತ್ರವೂ ಹೆಚ್ಚಳವಾಗಿದೆ. ಈ ಪ್ರದೇಶದಲ್ಲಿ ಸಾಕಷ್ಟು ಆಹಾರವೂ ಲಭಿಸುತ್ತಿದೆ. ಇದು ಅವುಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ. ವೆಲಿಂಗ್ಟನ್‌ ಶಾಲೆಯಲ್ಲಿ ಈ ಪಕ್ಷಿಗಳ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಿಸಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ 250 ಕಿವಿ ಪಕ್ಷಿಗಳನ್ನು ಇಲ್ಲಿನ ಪ್ರದೇಶಕ್ಕೆ ಬಿಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.