ಗೂಗಿ ವಾ ಥಿಯಾಂಗೊ
ನೈರೋಬಿ: ಕೀನ್ಯಾದ ಬಹುಶ್ರುತ ಕಾದಂಬರಿಕಾರ ಮತ್ತು ನಾಟಕಕಾರ ಗೂಗಿ ವಾ ಥಿಯಾಂಗೊ ಅವರು (87) ಇನ್ನಿಲ್ಲ ಎಂದು ಕೀನ್ಯಾ ಅಧ್ಯಕ್ಷ ಡಿಲಿಯಂ ರುಟೊ ತಿಳಿಸಿದ್ದಾರೆ.
ಥಿಯಾಂಗೊ ಅವರು ಸ್ವಾತಂತ್ರ್ಯೋತ್ತರ ಕಾಲಘಟ್ಟದ ಕೆಲವು ಉಚ್ಚ ವರ್ಗದವರನ್ನು ಕಟುವಾಗಿ ಟೀಕಿಸಿದ್ದಕ್ಕಾಗಿ ಜೈಲುವಾಸ ಅನುಭವಿಸಿದ್ದರು, ಎರಡು ದಶಕಗಳ ಕಾಲ ದೇಶಭ್ರಷ್ಟರಾಗಿದ್ದರು.
ಬ್ರಿಟನ್ನಿನಿಂದ ಸ್ವಾತಂತ್ರ್ಯ ಪಡೆಯಲು ನಡೆದ ಸಶಸ್ತ್ರ ಹೋರಾಟವನ್ನು ಥಿಯಾಂಗೊ ಅವರು ಹದಿಹರೆಯದಲ್ಲಿ ಇದ್ದಾಗಲೇ ಕಾಣಬೇಕಾಯಿತು. ಇದು ಅವರ ಹದಿಹರೆಯವನ್ನು ರೂಪಿಸಿತು. ತಮ್ಮ ಬರಹಗಳಲ್ಲಿ ಅವರು ವಸಾಹತು ಆಡಳಿತವನ್ನು ಮತ್ತು ಆ ಆಡಳಿತದ ಹಲವು ವಿಶೇಷ ಸವಲತ್ತುಗಳನ್ನು ಪಡೆದಿದ್ದ ಕೀನ್ಯಾದ ಉಚ್ಚ ವರ್ಗದ ಕೆಲವರನ್ನು ಗುರಿಯಾಗಿಸಿಕೊಂಡರು.
ರೈತರು ಮತ್ತು ಕಾರ್ಮಿಕರು ಥಿಯಾಂಗೊ ಅವರ ನಾಟಕ ‘ಗಾಹಿಕಾ ದೀಂಡಾ’ವನ್ನು (ನಾನು ಬಯಸಿದಾಗ ಮದುವೆ ಆಗುವೆ) ಆಡಿತೋರಿಸಿದಾಗ, 1977ರ ಡಿಸೆಂಬರ್ ತಿಂಗಳಲ್ಲಿ ಥಿಯಾಂಗೊ ಅವರನ್ನು ಬಂಧಿಸಿ, ಯಾವ ದೋಷಾರೋಪವೂ ಇಲ್ಲದೆ ಗರಿಷ್ಠ ಭದ್ರತೆಯ ಜೈಲಿನಲ್ಲಿ ಒಂದು ವರ್ಷ ಇರಿಸಲಾಗಿತ್ತು.
ಕೀನ್ಯಾ ಸಮಾಜದಲ್ಲಿನ ಅಸಮಾನತೆಯ ಬಗ್ಗೆ ಈ ನಾಟಕದಲ್ಲಿ ಟೀಕೆಗಳು ಇವೆ. ಇದರಿಂದ ಸಿಟ್ಟಿಗೆದ್ದ ಅಧಿಕಾರಿಗಳು ರಂಗಸ್ಥಳ ಇದ್ದ ಸೌಧವನ್ನು ನೆಲಸಮ ಮಾಡಲು ಮೂರು ಟ್ರಕ್ಕುಗಳಲ್ಲಿ ಪೊಲೀಸರನ್ನು ಕಳುಹಿಸಿದ್ದರು ಎಂದು ಥಿಯಾಂಗೊ ಅವರು ನಂತರ ಒಮ್ಮೆ ಹೇಳಿದ್ದರು.
ಕೀನ್ಯಾದ ಅಧ್ಯಕ್ಷ ಡೇನಿಯಲ್ ಅರಾಪ್ ಮೊಯಿ ಅವರ ಭದ್ರತಾ ಸಿಬ್ಬಂದಿಯು ತಮ್ಮನ್ನು ಬಂಧಿಸಿ, ಕೊಲ್ಲಲು ಯೋಜನೆ ರೂಪಿಸಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಥಿಯಾಂಗೊ ಅವರು 1982ರಲ್ಲಿ ಹೇಳಿ, ದೇಶಭ್ರಷ್ಟರಾಗಿದ್ದರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (ಇರ್ವಿನ್) ಥಿಯಾಂಗೊ ಅವರು ಇಂಗ್ಲಿಷ್ ಮತ್ತು ತುಲನಾತ್ಮಕ ಸಾಹಿತ್ಯದ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದರು.
ಮೊಯಿ ಅವರು 2004ರಲ್ಲಿ ಅಧಿಕಾರದಿಂದ ನಿರ್ಗಮಿಸಿದ ನಂತರದಲ್ಲಿ ಥಿಯಾಂಗೊ ಅವರ ದೇಶಭ್ರಷ್ಟ ಸ್ಥಿತಿ ಕೊನೆಗೊಂಡಿತು, ಅವರು ಕೀನ್ಯಾಕ್ಕೆ ಮರಳಿದರು. ಕೀನ್ಯಾದ ಈಗಿನ ಅಧ್ಯಕ್ಷ ರುಟೊ ಅವರು ಥಿಯಾಂಗೊ ಅವರಿಗೆ ಗೌರವ ಅರ್ಪಿಸಿದ್ದಾರೆ.
ಇಂಗ್ಲಿಷ್‌ನಲ್ಲಿ ಬರೆಯುವುದನ್ನು 1980ರಲ್ಲಿ ಕೈಬಿಟ್ಟ ಥಿಯಾಂಗೊ, ತಮ್ಮ ಮಾತೃಭಾಷೆ ‘ಗಿಕುಯು’ದಲ್ಲಿ ಬರೆಯಲು ಆರಂಭಿಸಿದರು. ಆಮದು ಮಾಡಿಕೊಂಡ ಭಾಷೆಗೆ ತಾವು ವಿದಾಯ ಹೇಳುತ್ತಿರುವುದಾಗಿ ಅವರು ಆಗ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.