
ನ್ಯೂಯಾರ್ಕ್: ಖಾಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ ನಿಖಿಲ್ ಗುಪ್ತಾ ವಿರುದ್ಧದ ಆರೋಪ ಸಾಬೀತಾಗಿದ್ದು, 24 ರಿಂದ 40 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಸಾಂವಿಧಾನಿಕವಾಗಿ ಸುರಕ್ಷತೆಯ ಹಕ್ಕುಗಳನ್ನು ಹೊಂದಿರುವ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ವಿದೇಶಿ ಪ್ರಜೆಗಳು ಒಡ್ಡುವ ಬೆದರಿಕೆಗಳಿಂದ ತಾಯ್ನಾಡನ್ನು ರಕ್ಷಿಸುವ ಎಫ್‌ಬಿಐನ ನಿರಂತರ ಬದ್ಧತೆಯನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ ಎಂದು ಎಫ್‌ಬಿಐ ಹೇಳಿದೆ.
‘ಎಫ್‌ಬಿಐ ನ್ಯೂಯಾರ್ಕ್ ಮತ್ತು ಅಮೆರಿಕದ ಅಟಾರ್ನಿ ಎಸ್‌ಡಿಎನ್‌ವೈ ನಡೆಸಿದ ತನಿಖೆಯಲ್ಲಿ ನಿಖಿಲ್ ಗುಪ್ತಾ ನ್ಯೂಯಾರ್ಕ್ ನಗರದಲ್ಲಿ ಅಮೆರಿಕ ಪ್ರಜೆಯೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದು ಸಾಬೀತಾಗಿದೆ’ಎಂದು ಎಫ್‌ಬಿಐ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
‘ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅಲಿಯಾಸ್ ನಿಕ್", ನ್ಯೂಯಾರ್ಕ್ ನಗರದಲ್ಲಿ ಅಮೆರಿಕದ ನಾಗರಿಕನನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಗಳಲ್ಲೂ ತಪ್ಪೊಪ್ಪಿಕೊಂಡಿದ್ದಾರೆ. ಪನ್ನೂ ಕೊಲೆಗಾಗಿ ಸುಪಾರಿ, ಕೊಲೆಗೆ ಸಂಚು ಮತ್ತು ಹಣ ವರ್ಗಾವಣೆಗೆ ಸಂಚು ಹೂಡಿದ ಆರೋಪ ಅವರ ಮೇಲಿತ್ತು. ಗುಪ್ತಾ ಇಂದು ಅಮೆರಿಕದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಸಾರಾ ನೆಟ್‌ಬರ್ನ್ ಅವರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಮೇ 29ರಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶರಾದ ವಿಕ್ಟರ್ ಅವರು ಶಿಕ್ಷೆ ವಿಧಿಸಲಿದ್ದಾರೆ’ಎಂದು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಅಮೆರಿಕದ ಅಟಾರ್ನಿ ಕಚೇರಿಯ ಹೇಳಿಕೆ ತಿಳಿಸಿದೆ.
'ನಿಖಿಲ್ ಗುಪ್ತಾ ಅಮೆರಿಕದ ಪ್ರಜೆಯ ವಿರುದ್ಧದ ಕೊಲೆಯ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಅಮೆರಿಕದ ಕಾನೂನು ಜಾರಿ ಅಧಿಕಾರಿಗಳ ಕ್ರಮಗಳಿಂದಾಗಿ ಈ ಕೊಲೆಯನ್ನು ತಡೆಯಲಾಯಿತು:’ ಎಂದು ಎಫ್‌ಬಿಐ ಸಹಾಯಕ ನಿರ್ದೇಶಕ ರೋಮನ್ ರೋಜಾವ್ಸ್ಕಿ ಹೇಳಿದ್ದಾರೆ.
‘ಅಮೆರಿಕದ ಪ್ರಜೆ ತನ್ನ ವಾಕ್ ಸ್ವಾತಂತ್ರ್ಯವನ್ನು ಚಲಾಯಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ದಬ್ಬಾಳಿಕೆಗೆ ಗುರಿಯಾಗಿದ್ದರು. ನೀವು ಎಲ್ಲೇ ಇದ್ದರೂ ಅಮೆರಿಕದ ನಾಗರಿಕರಿಗೆ ಹಾನಿ ಮಾಡಲು ಯತ್ನಿಸಿದರೆ ನಿಮ್ಮನ್ನು ಬಿಡುವುದಿಲ್ಲ ಎಂಬ ಎಫ್‌ಬಿಐ ಸಂದೇಶ ಸ್ಪಷ್ಟವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪನ್ನೂ ಹತ್ಯೆ ಯತ್ನ ಪ್ರಕರಣವು ಭಾರಿ ರಾಜತಾಂತ್ರಿಕ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಭಾರತದ ಕೈವಾಡ ಬಗ್ಗೆ ಆರೋಪ ಕೇಳಿಬಂದಿತ್ತು. ಆದರೆ, ನಿಖಿಲ್ ಗುಪ್ತಾ ಭಾರತ ಸರ್ಕಾರದ ನೌಕರನಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿತ್ತು.
ಮ್ಯಾನ್‌ಹ್ಯಾಟನ್‌ನ ಫೆಡರಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ದೋಷಾರೋಪಣೆಯಲ್ಲಿ, ಭಾರತ ಸರ್ಕಾರದ ಉದ್ಯೋಗಿ CC-1 ಎಂದು ಹೆಸರಿಸಲಾಗಿದ್ದ ವ್ಯಕ್ತಿಯೊಬ್ಬರು ಪನ್ನೂ ಹತ್ಯೆ ನಡೆಸಲು ಹಿಟ್‌ಮ್ಯಾನ್ ಅನ್ನು ನೇಮಿಸಿಕೊಳ್ಳಲು ನಿಖಿಲ್ ಗುಪ್ತಾ ಎಂಬ ಭಾರತೀಯ ಪ್ರಜೆಯನ್ನು ನೇಮಿಸಿಕೊಂಡಿದ್ದರು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ. ಆದರೆ, ಇದನ್ನು ಅಮೆರಿಕದ ಅಧಿಕಾರಿಗಳು ವಿಫಲಗೊಳಿಸಿದ್ದಾರೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದರು.
ಈ ಹಿಂದೆ ಹೊರಿಸಲಾದ ಆರೋಪಗಳ ಪ್ರಕಾರ, ಆರೋಪಿ ನಿಖಿಲ್ ಗುಪ್ತಾ ಭಾರತ ಸರ್ಕಾರದ ಉದ್ಯೋಗಿಯೊಬ್ಬರ ಸಹಚರನಾಗಿದ್ದು, ಅವರು ಮತ್ತು ಇತರರು ಒಟ್ಟಾಗಿ ನ್ಯೂಯಾರ್ಕ್ ನಗರದಲ್ಲಿ ಪನ್ನೂ ಹತ್ಯೆಗೆ ಸಂಚು ರೂಪಿಸಲು ಸಹಾಯ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಗುರುಪತ್ವಂತ್ ಸಿಂಗ್ ಪನ್ನೂ ಅವರನ್ನು ಭಾರತ ಭಯೋತ್ಪಾದಕ ಎಂದು ಘೋಷಿಸಿದ್ದು, ಅವರು ಅಮೆರಿಕ ಮತ್ತು ಕೆನಡಾದ ಪೌರತ್ವವನ್ನು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.