ADVERTISEMENT

ಯೆಮೆನ್ | ಕೇರಳ ಮೂಲದ ನಿಮಿಷಾಗೆ ಮರಣದಂಡನೆ ಸನಿಹ; ಮಗಳ ಉಳಿಸಿಕೊಳ್ಳಲು ತಾಯಿಯ ಯತ್ನ

ಪಿಟಿಐ
Published 2 ಜನವರಿ 2025, 12:50 IST
Last Updated 2 ಜನವರಿ 2025, 12:50 IST
<div class="paragraphs"><p>ನಿಮಿಷಾ ಪ್ರಿಯ ಮತ್ತು&nbsp;ತಾಯಿ ಪ್ರೇಮಾ ಕುಮಾರಿ</p></div>

ನಿಮಿಷಾ ಪ್ರಿಯ ಮತ್ತು ತಾಯಿ ಪ್ರೇಮಾ ಕುಮಾರಿ

   

‌ಚಿತ್ರಕೃಪೆ: ಎಕ್ಸ್‌

ಕೊಚ್ಚಿ: ಕೊಲೆ ಆರೋಪದಡಿ ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ಶುಶ್ರೂಷಕಿ ನಿಮಿಷಾ ಪ್ರಿಯಾ ಅವರಿಗೆ ಕೊನೆ ಕ್ಷಣದಲ್ಲಾದರೂ ಕ್ಷಮಾದಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರ ಕುಟುಂಬ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರು ಇದ್ದಾರೆ.

ADVERTISEMENT

ಯೆಮೆನ್ ಪ್ರಜೆಯ ಕೊಲೆಗೆ ಸಂಬಂಧಿಸಿದಂತೆ ನಿಮಿಷಾ ಪ್ರಿಯಾ ಅವರನ್ನು 2017ರಲ್ಲಿ ಬಂಧಿಸಲಾಗಿತ್ತು. ಕೊಲೆಯಾದ ತಲಾಲ್ ಅಬ್ದೊ ಮಹ್ದಿ ಅವರ ಕುಟುಂಬದವರು ಪರಿಹಾರ ಮೊತ್ತ ಸ್ವೀಕರಿಸಲು ಒಪ್ಪಿಕೊಂಡು ಕ್ಷಮೆ ನೀಡಿದರೆ ಮಾತ್ರ ನಿಮಿಷಾ ಪ್ರಿಯಾ ಅವರ ಶಿಕ್ಷೆ ರದ್ದಾಗುವ ಸಾಧ್ಯತೆ ಇದೆ.

‘ನಮಗೆ ಭರವಸೆ ಇದೆ. ಈ ನಿರ್ಣಾಯಕ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೆರವು ಸಿಗುವುದೂ ಸವಾಲು. ಅಗತ್ಯ ಹಣ ನೀಡಲು ನಾವು ಸಿದ್ಧರಾಗಿದ್ದೇವೆ’ ಎಂದು ‘ಸೇವ್ ನಿಮಿಷಾ ಪ್ರಿಯಾ ಅಂತರರಾಷ್ಟ್ರೀಯ ಆ್ಯಕ್ಷನ್ ಕೌನ್ಸಿಲ್’ ಸದಸ್ಯ ಬಾಬು ಜಾನ್ ತಿಳಿಸಿದ್ದಾರೆ.

ಆಂತರಿಕ ಯುದ್ಧಪೀಡಿತ ಯೆಮೆನ್‌ ಹಾಗೂ ಭಾರತದ ನಡುವೆ ದ್ವಿಪಕ್ಷೀಯ ಸಂಬಂಧದ ಕೊರತೆಯ ನಡುವೆಯೂ ರಾಜತಾಂತ್ರಿಕ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶ ನೀಡುವ ಭರವಸೆ ಇದೆ ಎಂದು ಬಾಬು ಹೇಳಿದ್ದಾರೆ.

ಬಂಧಿತ ಪ್ರಿಯಾ ಅವರಿಗೆ 2020ರಲ್ಲಿ ಮರಣದಂಡನೆ ಶಿಕ್ಷೆಯನ್ನು ಅಲ್ಲಿನ ನ್ಯಾಯಾಲಯ ನೀಡಿತ್ತು. ಮೇಲ್ಮನವಿ ಸಲ್ಲಿಕೆಯಾಗಿದ್ದರೂ ಯೆಮೆನ್‌ನ ಸುಪ್ರೀಂ ಕೋರ್ಟ್‌ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿಯಿತು. ನಂತರ ಯೆಮೆನ್ ರಾಷ್ಟ್ರಪತಿ ರಷದ್ ಅಲ್‌ ಅಲೀಮಿ ಅವರು ಶಿಕ್ಷೆಯನ್ನು ಅನುಮೋದಿಸಿದರು. 2023ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ಶಿಕ್ಷೆ ಎತ್ತಿ ಹಿಡಿಯುವುದರ ಜತೆಗೆ, ಕೊಲೆಯಾದ ವ್ಯಕ್ತಿಯ ಕುಟುಂಬದವರ ಕ್ಷಮಾಪಣೆ ದೊರೆತಲ್ಲಿ ಶಿಕ್ಷೆ ಕಡಿತಗೊಳಿಸಬಹುದು ಎಂದೂ ನ್ಯಾಯಾಲಯ ಹೇಳಿತ್ತು.

‘ಕೊಲೆಯಾದ ವ್ಯಕ್ತಿಯ ಕುಟುಂಬದವರೊಂದಿಗೆ ನಡೆದ ಸಂದಾನದಲ್ಲಿ 40 ಸಾವಿರ ಅಮೆರಿಕನ್ ಡಾಲರ್ (ಸುಮಾರು ₹35 ಲಕ್ಷ) ನೀಡಲು ಮಾತುಕತೆ ನಡೆದಿತ್ತು. ವಿದೇಶಾಂಗ ಇಲಾಖೆಯ ಮಧ್ಯಸ್ಥಿಕೆಯಲ್ಲಿ ನಡೆದ ಈ ಸಂಧಾನದಂತೆ ಎರಡು ಕಂತುಗಳಲ್ಲಿ ಹಣ ನೀಡುವ ಒಪ್ಪಂದವೂ ಆಗಿತ್ತು. ರಾಷ್ಟ್ರಪತಿಯಿಂದ ಡಿ. 30ರಂದು ಮರಣದಂಡನೆಗೆ ಅನುಮೋದನೆ ದೊರೆತಿದೆ. ಡಿ. 27ರಂದು ನೊಂದ ಕುಟುಂಬಕ್ಕೆ ಹಣವನ್ನೂ ನೀಡಲಾಗಿದೆ. ಹೀಗಾಗಿ ಅವರ ಮರಣದಂಡನೆ ರದ್ದುಗೊಳ್ಳುವ ವಿಶ್ವಾಸವಿದೆ’ ಎಂದು ಜಾನ್ ಬಾಬು ಹೇಳಿದ್ದಾರೆ.

‘ನಿಮಿಷಾ ಅವರನ್ನು ಮರಣದಂಡನೆಯಿಂದ ಪಾರು ಮಾಡುವ ಅಭಿಯಾನವು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲ ಎನ್‌ಜಿಒಗಳು ನಡೆಸಿದ್ದವು. ಜತೆಗೆ ಇದಕ್ಕಾಗಿ ನಿಧಿಯನ್ನೂ ಸಂಗ್ರಹಿಸಿದ್ದವು. ಮೂಲಗಳ ಪ್ರಕಾರ ಇನ್ನು ಒಂದು ತಿಂಗಳ ಒಳಗಾಗಿ ನಿಮಿಷಾ ಅವರ ಮರಣದಂಡನೆ ನಡೆಯಬಹುದು ಎಂದೆನ್ನಲಾಗಿದೆ. ಇನ್ನೂ ಹೆಚ್ಚಿನ ಹಣದ ಬೇಡಿಕೆ ಇದ್ದಲ್ಲಿ ಅದನ್ನೂ ನೀಡಲು ಸಿದ್ಧ’ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನಿಮಿಷಾ ಅವರ ತಂದೆ ಥಾಮಸ್, ‘ದಿನಗೂಲಿ ನೌಕರನಾಗಿ, ಚಾಲಕನಾಗಿ ದುಡಿಯುತ್ತಿದ್ದೆ. ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಅನಿವಾರ್ಯವಾಗಿ ಮಗಳನ್ನು ವಿದ್ಯಾರ್ಥಿ ನಿಲಯಕ್ಕೆ ಸೇರಿಸಿದೆ. ₹60 ಲಕ್ಷ ಖರ್ಚು ಮಾಡಿ ಯೆಮೆನ್‌ನಲ್ಲಿ ಕ್ಲಿನಿಕ್ ಹಾಕಿದೆವು. ಆದರೆ 2017ಕ್ಕೆ ಅದು ಬಂದ್ ಆಯಿತು. ಮನೆಯನ್ನೂ ಒಳಗೊಂಡು ಎಲ್ಲಾ ಆಸ್ತಿಯನ್ನೂ ಮಾರಾಟ ಮಾಡಿದ್ದೇನೆ. ಈಗ ಮಗಳು ಹಾಗೂ ಮಡದಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ’ ಎಂದಿದ್ದಾರೆ.

ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ ಅವರು ಸದ್ಯ ಯೆಮೆನ್‌ನ ರಾಜಧಾನಿ ಸನಾದಲ್ಲಿದ್ದಾರೆ. ಮಗಳನ್ನು ಉಳಿಸಿಕೊಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಮೂಲಕ ಕೊನೆಯ ಪ್ರಯತ್ನ ನಡೆಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ವಿಡಿಯೊ ಸಂದೇಶ ಕಳುಹಿಸಿರುವ ಅವರು, ‘ಇದು ನಮ್ಮ ಕೊನೆಯ ಮನವಿ. ಪ್ರಿಯಾ ಬಳಿ ಇನ್ನು ಕೆಲವೇ ದಿನಗಳು ಉಳಿದಿವೆ. ನಿಧಿ ಸಂಗ್ರಹಕ್ಕೆ ಕೌನ್ಸಿಲ್‌ನ ಎಲ್ಲಾ ಸದಸ್ಯರು ಹಗಲಿರುಳು ಶ್ರಮಿಸಿದ್ದಾರೆ. ಆಕೆಯನ್ನು ಉಳಿಸಲು ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಪ್ರಯತ್ನ ನಡೆಸುವಂತೆ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.