
ವಾಷಿಂಗ್ಟನ್: ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿಲ್ಲ. ಒಪ್ಪಂದದ ಪ್ರಕಾರವೇ ಅದು ಮುಂದುವರೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಶುಕ್ರವಾರವಷ್ಟೇ (ಫೆ.20) ಅಮೆರಿಕದ ಸುಪ್ರೀಂ ಕೋರ್ಟ್, ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಅಮೆರಿಕ ವಿಧಿಸಿದ್ದ ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿತ್ತು. ಅದಾದ ಬಳಿಕ ಟ್ರಂಪ್, ಶ್ವೇತಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ.
ಭಾರತದೊಂದಿಗೆ ನಮ್ಮ ಸಂಬಂಧ ಅತ್ಯುತ್ತಮವಾಗಿದೆ. ವ್ಯಾಪಾರ ಒಪ್ಪಂದವೂ ಕೂಡ ಮುಂದುವರೆಯಲಿದೆ. ಒಪ್ಪಂದದ ಬಳಿಕ ಅವರು, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಕೂಡ ನಿಲ್ಲಿಸಿದ್ದಾರೆ. ಇದರಿಂದ ಘೋರ ಯುದ್ಧವೊಂದು ನಿಲ್ಲಲಿದ್ದು, ಪ್ರತಿ ತಿಂಗಳು 25 ಸಾವಿರ ಮಂದಿ ಸಾಯುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.
ವ್ಯಾಪರ ಒಪ್ಪಂದ ಪ್ರಕಾರ, ನಾವು ಭಾರತಕ್ಕೆ ಸುಂಕ ನೀಡುವುದಿಲ್ಲ.. ಬದಲಾಗಿ ಅವರು ನಮಗೆ ಸುಂಕ ನೀಡುತ್ತಾರೆ. ಇದು ಮುಂದುವರೆಯಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಕಳೆದ ತಿಂಗಳಷ್ಟೇ ಭಾರತ ಮತ್ತು ಅಮೆರಿಕ, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಭಾರತ ಮತ್ತು ಪಾಕಿಸ್ತಾನ ಯುದ್ಧವನ್ನು ನಿಲ್ಲಿಸದಿದ್ದರೆ ಶೇ 200ರಷ್ಟು ಸುಂಕ ಹೇರುವುದಾಗಿ ಬೆದರಿಕೆ ಹಾಕಿದ್ದೆ. ಪರಮಾಣು ಸಾಮರ್ಥ್ಯದ ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ನಿಲ್ಲಿಸಿದ್ದೇನೆ. ಇದರಿಂದ 35 ಮಿಲಿಯನ್ ಜೀವಗಳನ್ನು ಉಳಿಸಿಕೊಳ್ಳಲಾಯಿತು. ಸುಂಕದಿಂದಾಗಿ ಇದೆಲ್ಲಾ ಸಾಧ್ಯವಾಯಿತು ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
ಅಧ್ಯಕ್ಷ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕದ ಸುಪ್ರೀಂ ಕೋರ್ಟ್ 6:3 ಬಹುಮತದ ತೀರ್ಪು ನೀಡಿದೆ ಹಾಗೂ ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.