ADVERTISEMENT

ಸೇನೆಯಿಂದ ಒತ್ತಡವಿಲ್ಲ, ಆಡಳಿತದಲ್ಲಿ ಹಸ್ತಕ್ಷೇಪವೂ ಇಲ್ಲ: ಪಾಕ್‌ ಪ್ರಧಾನಿ ಖಾನ್‌

ಏಜೆನ್ಸೀಸ್
Published 29 ನವೆಂಬರ್ 2020, 6:19 IST
Last Updated 29 ನವೆಂಬರ್ 2020, 6:19 IST
ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌
ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌    

ಇಸ್ಲಾಮಾಬಾದ್‌: ಪಾಕಿಸ್ತಾನದ ರಾಜಕೀಯ ಮತ್ತು ಆಡಳಿತದಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಅಸಮಾಧಾನ ಮತ್ತು ಟೀಕೆಗಳನ್ನು ನಿವಾರಿಸಲು ಮುಂದಾಗಿರುವ ಪ್ರಧಾನಿ ಇಮ್ರಾನ್‌ ಖಾನ್‌, 'ವಿದೇಶಾಂಗ ನೀತಿ ರೂಪಿಸುವಲ್ಲಿ ಸೇನೆಯಿಂದ ಯಾವುದೇ ಒತ್ತಡವಿಲ್ಲ,' ಎಂದು ಸ್ಪಷ್ಟನೆ ನೀಡಿದ್ದಾರೆ.

ಪಾಕಿಸ್ತಾನ ಸೇನೆ ಆರಿಸಿಕೊಂಡ ಪ್ರಧಾನಿ ಎಂಬ ಮೂದಲಿಕೆಗೆ ಆಗಾಗ್ಗೆ ಗುರಿಯಾಗುವ ಇಮ್ರಾನ್‌, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ' ಪಾಕಿಸ್ತಾನದ ವಿದೇಶಾಂಗ ನೀತಿಯು ಇಂದು 'ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್' (ಪಿಟಿಐ) ಪಕ್ಷದ ಪ್ರಣಾಳಿಕೆಯನ್ನು ಆಧರಿಸಿದೆ,' ಎಂದು ಹೇಳಿದ್ದಾರೆ.

'ನನಗೆ ಇಷ್ಟವಿಲ್ಲದ ಕೆಲಸ ಮಾಡುವಂತೆ ಸೇನೆಯು ನನ್ನನ್ನು ನಿರ್ದೇಶಿಸಿಲ್ಲ' ಎಂದು ಇಮ್ರಾನ್‌ ಹೇಳಿದರು. 'ಮಿಲಿಟಿರಿಯು ನನ್ನ ಮೇಲೆ ಒತ್ತಡ ಹೇರಿದ್ದರೆ ನಾನು ಅದಕ್ಕೆ ಪ್ರತಿರೋಧ ತೋರುತ್ತಿದ್ದೆ. ಇಂದು ಜಾರಿಯಾಗಿರುವ ಇಡೀ ವಿದೇಶಾಂಗ ನೀತಿಗಳು ನನ್ನವು. ಇದಕ್ಕೆ ಸಾಕ್ಷಿಯಾಗಿ ಪಿಟಿಐನ ಪ್ರಣಾಳಿಕೆಯನ್ನು ಪರಿಶೀಲಿಸಬಹುದು,' ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು.

ADVERTISEMENT

ಪಾಕಿಸ್ತಾನ ಸರ್ಕಾರದಲ್ಲಿ ಸೇನೆಯು ಹಸ್ತಕ್ಷೇಪ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ನಡುವೆಯೇ ಇಮ್ರಾನ್‌ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ವಿರೋಧ ಪಕ್ಷಗಳು ಒಟ್ಟುಗೂಡಿ 'ಪಾಕಿಸ್ತಾನ ಡೆಮಕ್ರಟಿಕ್‌ ಮೂವ್‌ಮೆಂಟ್‌ (ಪಿಡಿಎಂ)' ಕೂಟ ರಚಿಸಿಕೊಂಡಿದ್ದು, ಇಮ್ರಾನ್‌ ಸರ್ಕಾರವನ್ನು ಕಿತ್ತೆಸೆಯುವ ಸಂಕಲ್ಪ ಮಾಡಿವೆ. ಪಾಕಿಸ್ತಾನ ಸೇನೆಯಿಂದ 2018ರ ಚುನಾವಣೆಯಲ್ಲಿ ಇಮ್ರಾನ್‌ ನೇಮಕವಾಗಿದ್ದಾರೆಯೇ ಹೊರತು ಆಯ್ಕೆಯಾಗಿಲ್ಲ ಎಂಬುದು ವಿರೋಧ ಪಕ್ಷಗಳ ಪ್ರಮುಖ ಆರೋಪವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.