ADVERTISEMENT

ವಿಜ್ಞಾನ, ಸಾಹಿತ್ಯದ ಪ್ರಶಸ್ತಿ ತಾಯ್ನಾಡಿನಲ್ಲೇ ಪ್ರದಾನ: ನೊಬೆಲ್ ಪ್ರತಿಷ್ಠಾನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 11:32 IST
Last Updated 23 ಸೆಪ್ಟೆಂಬರ್ 2021, 11:32 IST
ನೊಬೆಲ್‌ ಪದಕ
ನೊಬೆಲ್‌ ಪದಕ   

ಸ್ಟಾಕ್‌ಹೋಮ್ (ಎಎಫ್‌ಪಿ): ವಿಜ್ಞಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್‌ ಪ್ರಶಸ್ತಿಗೆ ಭಾಜನರಾಗುವವರು ತಮ್ಮ ತಾಯ್ನಾಡಿನಲ್ಲೇ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ಪ್ರತಿಷ್ಠಾನವು ಗುರುವಾರ ಹೇಳಿದೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸತತ ಎರಡನೇ ವರ್ಷ ಈ ಕ್ರಮಕೈಗೊಳ್ಳಲಾಗಿದೆ.

ನಾರ್ವೆಯಲ್ಲಿ ಸಾಂಪ್ರದಾಯಿಕವಾಗಿ ನೀಡಲಾಗುವ ನೊಬೆಲ್‌ ಶಾಂತಿ ಪ್ರಶಸ್ತಿ ಕುರಿತು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರತಿಷ್ಠಾನವು ತಿಳಿಸಿದೆ.

ADVERTISEMENT

ನೊಬೆಲ್ ಸಮಿತಿಯು ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರನ್ನು ಓಸ್ಲೋಗೆ ಸ್ವಾಗತಿಸುವ ಸಾಧ್ಯತೆಯನ್ನು ಈಗಲೂ ಮುಕ್ತವಾಗಿರಿಸಿದೆ. ಓಸ್ಲೋದಲ್ಲಿ ನಡೆಯುವ ಸಮಾರಂಭದ ಸ್ವರೂಪದ ಬಗ್ಗೆ ಅಕ್ಟೋಬರ್ ಮಧ್ಯದಲ್ಲಿ ಘೋಷಿಸಲಾಗುವುದು ಎಂದು ಅದು ಹೇಳಿದೆ.

ಕಳೆದ ವರ್ಷವು ಸಾಂಕ್ರಾಮಿಕ ರೋಗದಿಂದ ವಿದೇಶ ಪ್ರಯಾಣಕ್ಕೆ ನಿರ್ಬಂಧವಿದ್ದಿದ್ದರಿಂದ ವಿಜ್ಞಾನ ಮತ್ತು ಸಾಹಿತ್ಯದ ನೊಬೆಲ್‌ ಪ್ರಶಸ್ತಿಗಳನ್ನು ಪ್ರಶಸ್ತಿ ವಿಜೇತರ ತಾಯ್ನಾಡಿನಲ್ಲೇ ನೀಡಲು ನಿರ್ಧರಿಸಲಾಯಿತು. ಕಳೆದ ವರ್ಷದಂತೆಯೇ ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭಗಳು ಡಿಜಿಟಲ್ ಮತ್ತು ಭೌತಿಕ ಉಪಸ್ಥಿತಿಯ ಮಿಶ್ರಣವಾಗಿರಲಿದೆ ಎಂದು ಪ್ರತಿಷ್ಠಾನ ಹೇಳಿದೆ.

‘ಸಾಂಕ್ರಾಮಿಕ ರೋಗ ಮತ್ತು ಅಂತರರಾಷ್ಟ್ರೀಯ ಪ್ರಯಾಣದ ಸಾಧ್ಯತೆಗಳ ಬಗ್ಗೆ ಅನಿಶ್ಚಿತತೆ ಇರುವುದರಿಂದ 2021ರ ಸಾಲಿನ ಪ್ರಶಸ್ತಿ ವಿಜೇತರು ತಮ್ಮ ತಾಯ್ನಾಡಿನಲ್ಲೇ ನೊಬೆಲ್‌ ಪದಕಗಳನ್ನು ಮತ್ತು ಪ್ರಮಾಣಪತ್ರಗಳನ್ನು ಸ್ವೀಕರಿಸಬೇಕಾಗಿದೆ’ ಎಂದು ನೊಬೆಲ್ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕ ವಿದಾರ್ ಹೆಲ್ಗೆಸನ್ ಹೇಳಿದ್ದಾರೆ.

ನೊಬೆಲ್‌ ಪ್ರತಿಷ್ಠಾನಕ್ಕೆ ಈ ವರ್ಷ 120ನೇ ವಾರ್ಷಿಕೋತ್ಸವವಾಗಿದ್ದು, ಅಕ್ಟೋಬರ್ ಆರಂಭದಲ್ಲಿ ನೊಬೆಲ್‌ ಬಹುಮಾನ ವಿಜೇತರ ಹೆಸರನ್ನು ಪ್ರಕಟಿಸಲಿದೆ. ವೈದ್ಯಕೀಯ (ಔಷಧ), ರಾಸಾಯನ ವಿಜ್ಞಾನ, ಭೌತವಿಜ್ಞಾನ, ಸಾಹಿತ್ಯ ಹಾಗೂ ಶಾಂತಿ ನೊಬೆಲ್‌ ಪ್ರಶಸ್ತಿಗಳನ್ನು ಅಕ್ಟೋಬರ್ 4 ಮತ್ತು 11ರ ನಡುವೆ ಘೋಷಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.