ADVERTISEMENT

2020ಕ್ಕಿಂತಲೂ 2021 ಅತ್ಯಂತ ಕೆಟ್ಟ ವರ್ಷವಾಗಿರಲಿದೆ: ಬೀಸ್ಲೆ

ಏಜೆನ್ಸೀಸ್
Published 15 ನವೆಂಬರ್ 2020, 8:42 IST
Last Updated 15 ನವೆಂಬರ್ 2020, 8:42 IST
ಡೇವಿಡ್‌ ಬೀಸ್ಲೆ
ಡೇವಿಡ್‌ ಬೀಸ್ಲೆ   

ವಿಶ್ವಸಂಸ್ಥೆ: ‘2020ಕ್ಕಿಂತಲೂ2021 ಅತ್ಯಂತ ಕೆಟ್ಟ ವರ್ಷವಾಗಿರಲಿದೆ’ ಎಂದು ವಿಶ್ವ ಆಹಾರ ಯೋಜನೆಯ ಮುಖ್ಯಸ್ಥ ಡೇವಿಡ್‌ ಬೀಸ್ಲೆ ಎಚ್ಚರಿಸಿದ್ದಾರೆ.

ವಿಶ್ವ ಸಂಸ್ಥೆಯ ಭಾಗವಾಗಿರುವ ವಿಶ್ವ ಆಹಾರ ಯೋಜನೆಯನ್ನು (ಡಬ್ಲ್ಯುಎಫ್‌ಪಿ)2020ನೇ ಸಾಲಿನ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು.

ಹಸಿವು ನೀಗಿಸುವ ನಿಟ್ಟಿನಲ್ಲಿ ಡಬ್ಲ್ಯುಎಫ್‌ಪಿ ನಡೆಸಿರುವ ಕಾರ್ಯಕ್ರಮಗಳು, ಪ್ರಯತ್ನಗಳನ್ನು ಪರಿಗಣಿಸಿ ನೊಬೆಲ್‌ ಸಮಿತಿಯು ಈ ಪ್ರಶಸ್ತಿ ನೀಡಿತ್ತು.

ADVERTISEMENT

ಘರ್ಷಣೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಡಬ್ಲ್ಯುಎಫ್‌ಪಿ ಶ್ರಮಿಸಿದೆ. ಜೊತೆಗೆ ಹಸಿವನ್ನು ಯುದ್ಧಕ್ಕೆ ಅಸ್ತ್ರವಾಗಿ ಬಳಸುವುದನ್ನು ತಪ್ಪಿಸುವ ಪ್ರಯತ್ನಗಳನ್ನು ಮಾಡಿದೆ ಎಂದೂ ನೊಬೆಲ್‌ ಸಮಿತಿ ಹೇಳಿತ್ತು.

‘ಹಸಿವು ನೀಗಿಸುವ ನಿಟ್ಟಿನಲ್ಲಿ ನಾವು ಅವಿರತವಾಗಿ ಶ್ರಮಿಸುತ್ತಿದ್ದೇವೆ. ನಮ್ಮ ಕಾರ್ಯವನ್ನು ಗುರುತಿಸಿ ನೊಬೆಲ್‌ ಪ್ರಶಸ್ತಿ ನೀಡಿರುವುದು ಖುಷಿಯ ವಿಚಾರ. ಈ ವರ್ಷಕ್ಕಿಂತಲೂ ಮುಂದಿನ ವರ್ಷ ಪರಿಸ್ಥಿತಿ ತುಂಬಾ ಬಿಗಡಾಯಿಸಲಿದೆ. ಇದನ್ನು ಎದುರಿಸಲು ನಾವು ಈಗಿನಿಂದಲೇ ಸಜ್ಜಾಗಬೇಕಿದೆ’ ಎಂದು ಬೀಸ್ಲೆ ತಿಳಿಸಿದ್ದಾರೆ.

‘ಕೊರೊನಾ ಸೋಂಕಿನ ಪಸರಿಸುವಿಕೆ ಮತ್ತಷ್ಟು ಹೆಚ್ಚಲಿದೆ. ಇದರಿಂದಾಗಿ ಬಡ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳ ಆರ್ಥಿಕತೆ ಮತ್ತಷ್ಟು ಬಿಗಡಾಯಿಸಲಿದೆ. ಮತ್ತೆ ಲಾಕ್‌ಡೌನ್‌ ಪರ್ವ ಶುರುವಾಗುವ ಅಪಾಯವಿದೆ’ ಎಂದಿದ್ದಾರೆ.

‘ಈ ವರ್ಷ ಎಲ್ಲಾ ರಾಷ್ಟ್ರಗಳ ಖಜಾನೆ ತುಂಬಿತ್ತು. ಮುಂದಿನ ವರ್ಷದ ವೇಳೆಗೆ ಅದು ಬರಿದಾಗುವ ಅಪಾಯವಿದೆ. ಈ ವರ್ಷ ಸಿಕ್ಕಷ್ಟು ಹಣ2021ಕ್ಕೆ ಸಿಗುವುದು ಅನುಮಾನ. ಹೀಗಾಗಿ ಎಲ್ಲಾ ರಾಷ್ಟ್ರಗಳ ನಾಯಕರ ಜೊತೆ ಖುದ್ದಾಗಿ ಮತ್ತು ಆನ್‌ಲೈನ್‌ ಮೂಲಕ ಮಾತನಾಡಿ ಮುಂದೆ ಉದ್ಭವಿಸಬಹುದಾದ ಅಪಾಯದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದೇವೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.