ADVERTISEMENT

ಉಕ್ರೇನ್‌: ವರ್ಷ ಕಳೆದರೂ ನಿಲ್ಲದ ಸಮರ

ಪ್ರಜಾವಾಣಿ ವಿಶೇಷ
Published 24 ಫೆಬ್ರುವರಿ 2023, 21:45 IST
Last Updated 24 ಫೆಬ್ರುವರಿ 2023, 21:45 IST
ರಷ್ಯಾ–ಉಕ್ರೇನ್‌ ಯುದ್ಧ ಆರಂಭವಾಗಿ ವರ್ಷವಾದ ಸಂದರ್ಭದಲ್ಲಿ, ಟೋಕಿಯೊದ ಯುಎನ್‌ ವಿಶ್ವವಿದ್ಯಾಲಯದ ಹೊರಭಾಗದಲ್ಲಿ ಜನರು ಶುಕ್ರವಾರ ಮೊಂಬತ್ತಿ ಹಚ್ಚಿ, ಯುದ್ಧದಲ್ಲಿ ಮೃತರಾದವರಿಗೆ ನಮನ ಸಲ್ಲಿಸಿದರು  –ಎಎಫ್‌ಪಿ ಚಿತ್ರ
ರಷ್ಯಾ–ಉಕ್ರೇನ್‌ ಯುದ್ಧ ಆರಂಭವಾಗಿ ವರ್ಷವಾದ ಸಂದರ್ಭದಲ್ಲಿ, ಟೋಕಿಯೊದ ಯುಎನ್‌ ವಿಶ್ವವಿದ್ಯಾಲಯದ ಹೊರಭಾಗದಲ್ಲಿ ಜನರು ಶುಕ್ರವಾರ ಮೊಂಬತ್ತಿ ಹಚ್ಚಿ, ಯುದ್ಧದಲ್ಲಿ ಮೃತರಾದವರಿಗೆ ನಮನ ಸಲ್ಲಿಸಿದರು –ಎಎಫ್‌ಪಿ ಚಿತ್ರ   

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು 2022ರ ಫೆಬ್ರುವರಿ 24ರಂದು ಉಕ್ರೇನ್‌ ಮೇಲೆ ದಾಳಿ ಆರಂಭಿಸಿದಾಗ ಯುದ್ಧವು ಒಂದು ವರ್ಷ ಕಳೆದರೂ ನಿಲ್ಲದು ಎಂಬುದರ ಕಲ್ಪನೆ ಯಾರಿಗೂ ಇರಲಿಲ್ಲ. ಉಕ್ರೇನ್‌ಗೆ ಹೋಲಿಸಿದರೆ ರಷ್ಯಾ ಬಹುದೊಡ್ಡ ಸೇನಾ ಶಕ್ತಿ. ರಷ್ಯಾ ಮುಂದೆ ಅಲ್ಪ ಕಾಲ ಹಿಡಿದು ನಿಲ್ಲುವುದೂ ಉಕ್ರೇನ್‌ಗೆ ಕಷ್ಟವಾಗಬಹುದು ಎಂದೇ ಜಗತ್ತು ಭಾವಿಸಿತ್ತು. ಆದರೆ, ಎಲ್ಲ ಲೆಕ್ಕಾಚಾರಗಳನ್ನೂ ತಲೆ ಕೆಳಗೆ ಮಾಡಿ ಉಕ್ರೇನ್‌ ಯುದ್ಧವನ್ನು ಎದುರಿಸಿದೆ. ಆದರೆ, ಅಪಾರ ಕಷ್ಟ ನಷ್ಟವನ್ನು ಅನುಭವಿಸಿದೆ. ರಷ್ಯಾ ಭಾಗದಲ್ಲಿಯೂ ನಷ್ಟ ಉಂಟಾಗಿದೆ.

ಯುದ್ಧ ಕೊನೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಾವಿರಾರು ಮಂದಿ ಯುದ್ಧದಲ್ಲಿ ಬಲಿಯಾಗಿದ್ದಾರೆ. ಲಕ್ಷಾಂತರ ಮಂದಿ ಮನೆ ತೊರೆದು ನಿರಾಶ್ರಿತರಾಗಿದ್ದಾರೆ. ಕೋಟ್ಯಂತರ ಡಾಲರ್‌ ಮೌಲ್ಯದ ಆಸ್ತಿ ನಷ್ಟವಾಗಿದೆ.

ಉಕ್ರೇನ್‌ನ ಹಲವು ಪ್ರದೇಶಗಳನ್ನು ರಷ್ಯಾ ಸೇನೆಯು ವಶಕ್ಕೆ ಪಡೆದಿದೆ. ಆದರೆ ಅವುಗಳಲ್ಲಿ ಕೆಲವು ಪ್ರದೇಶಗಳನ್ನು ಮರಳಿ ವಶಕ್ಕೆ ಪಡೆಯುವಲ್ಲಿ ಉಕ್ರೇನ್‌ ಯಶಸ್ವಿಯಾಗಿದೆ. ಅಮೆರಿಕ ಮತ್ತು ಪಶ್ಚಿಮದ ದೇಶಗಳು ಉಕ್ರೇನ್‌ಗೆ ನಿರಂತರವಾಗಿ ನೆರವು ನೀಡಿವೆ ಮತ್ತು ಶಸ್ತ್ರಾಸ್ತ್ರ ಪೂರೈಸಿವೆ. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಷ್ಯಾ ಆಕ್ರಮಣದ ನಡುವೆಯೂ ದೇಶ ತೊರೆಯಲು ನಿರಾಕರಿಸಿದ್ದಾರೆ. ಹೋರಾಟಕ್ಕೆ ಜನರನ್ನು ಸಂಘಟಿಸುವಲ್ಲಿ ಅವರು ಮುಂಚೂಣಿಯಲ್ಲಿ ನಿಂತು ಮಹತ್ವದ ಪಾತ್ರ ವಹಿಸಿದ್ದಾರೆ. ಮಿತ್ರ ದೇಶಗಳು ಸದಾ ಸೇನಾ ನೆರವು ನೀಡುವಂತೆಯೂ ನೋಡಿಕೊಂಡಿದ್ದಾರೆ.

ADVERTISEMENT

ಯುದ್ಧದ ಪರಿಣಾಮಗಳು ಜಾಗತಿಕ ಮಟ್ಟದಲ್ಲಿ ಪ್ರತಿಧ್ವನಿಸಿವೆ. ಮೈತ್ರಿಕೂಟಗಳು ಮರುರೂಪಿತವಾಗಿವೆ ಮತ್ತು ಬಲಗೊಂಡಿವೆ. ಧಾನ್ಯಗಳಿಂದ ಹಿಡಿದು ಪೆಟ್ರೋಲಿಯಂ ಉತ್ಪನ್ನಗಳ ವರೆಗೆ ಎಲ್ಲದರ ಮೇಲೆಯೂ ಯುದ್ಧದ ಪ್ರತಿಕೂಲ ಪರಿಣಾಮ ಉಂಟಾಗಿದೆ. ಯುರೋಪ್‌ನ ದೇಶಗಳು ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿವೆ. ನ್ಯಾಟೊ ಸಂಘಟನೆಯು ಹೆಚ್ಚು ಸಕ್ರಿಯಗೊಂಡಿದೆ. ಸ್ವೀಡನ್‌ ಮತ್ತು ಫಿನ್ಲೆಂಡ್ ದೇಶಗಳು ನ್ಯಾಟೊ ಸದಸ್ವತ್ಯ ಪಡೆದುಕೊಳ್ಳುವ ಸಾಧ್ಯತೆ ಇದೆ. ಚೀನಾವು ಯುದ್ಧಕ್ಕೆ ಸಂಬಂಧಿಸಿ ಹೆಚ್ಚು ಎಚ್ಚರಿಕೆಯ ಹೆಜ್ಜೆ ಇರಿಸಿದೆ. ರಷ್ಯಾ ಜೊತೆಗಿನ ಸಂಬಂಧಕ್ಕೆ ಹಾನಿ ಆಗದಂತೆ ನೋಡಿಕೊಂಡಿದ್ದರೂ ಶಾಂತಿ ಸ್ಥಾಪನೆಯಾಗಬೇಕು ಎಂದು ಕರೆ ಕೊಟ್ಟಿದೆ.

ರಷ್ಯಾ ಹೆಚ್ಚು ಹೆಚ್ಚು ಏಕಾಂಗಿಯಾಗುತ್ತಾ ಸಾಗಿದೆ. ರಷ್ಯಾ ಸೇನೆಯು ಯುದ್ಧ ರಂಗದಲ್ಲಿ ಹಲವು ಬಾರಿ ಭಾರಿ ಸಂಕಷ್ಟಕ್ಕೆ ಒಳಗಾಗಿದೆ. ಆದರೆ, ರಷ್ಯಾ ಸಾಮ್ರಾಜ್ಯವನ್ನು ಮರಳಿ ಕಟ್ಟುವ ಇಚ್ಛೆ ಹೊಂದಿರುವ ಪುಟಿನ್ ಅವರು ಯುದ್ಧದಿಂದ ದೂರ ಸರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಪುಟಿನ್‌ ಅವರು ಈ ಯುದ್ಧವನ್ನು ಪಶ್ಚಿಮದ ದೇಶಗಳ ಜೊತೆಗಿನ ಸಂಘರ್ಷ ಎಂಬಂತೆ ನೋಡುತ್ತಿದ್ದಾರೆ.

71 ಸಾವಿರ ಯುದ್ಧಾಪರಾಧ

ರಷ್ಯಾ–ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿ 71 ಸಾವಿರಕ್ಕೂ ಹೆಚ್ಚು ಯುದ್ಧಾಪರಾಧಗಳು ವರದಿಯಾಗಿವೆ. ಇವುಗಳನ್ನು ವಿಚಾರಣೆಗೆ ಒಳಪಡಿಸುವುದು ಸುಲಭದ ಕೆಲಸವಲ್ಲ. ಹತ್ಯೆ ಮತ್ತು ಗಲ್ಲು ಶಿಕ್ಷೆ, ಶೆಲ್‌ ದಾಳಿ, ಗಡೀಪಾರು, ಮಕ್ಕಳ ಅಪಹರಣ, ಹಿಂಸೆ, ಲೈಂಗಿಕ ದೌರ್ಜನ್ಯ ಮತ್ತು ಅಕ್ರಮ ಬಂಧನದಂತಹ ಹಲವು ಪ್ರಕರಣಗಳು ನಡೆದಿವೆ ಎಂದು ಉಕ್ರೇನ್‌ ಮತ್ತು ಪಶ್ಚಿಮದ ದೇಶಗಳು ಹೇಳಿವೆ. ಆದರೆ, ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಿಲ್ಲ ಎಂದು ರಷ್ಯಾ ಹೇಳಿಕೊಂಡಿದೆ.

ಸಾವಿರಾರು ದಾಳಿಗಳು

ಉಕ್ರೇನ್‌ ಮೇಲೆ ರಷ್ಯಾವು ಐದು ಸಾವಿರಕ್ಕೂ ಹೆಚ್ಚು ಕ್ಷಿಪಣಿ ದಾಳಿ, 3,500ಕ್ಕೂ ಹೆಚ್ಚು ವಾಯು ದಾಳಿ, ಒಂದು ಸಾವಿರಕ್ಕೂ ಹೆಚ್ಚು ಡ್ರೋನ್‌ ದಾಳಿಗಳನ್ನು ನಡೆಸಿದೆ ಎಂದು ವರದಿಯಾಗಿದೆ. ಇನ್ಸ್‌ಟಿಟ್ಯೂಟ್‌ ಆಫ್‌ ಸ್ಟಡಿ ಆಫ್‌ ವಾರ್‌ ಎಂಬ ಸಂಸ್ಥೆಯ ಪ್ರಕಾರ, ಉಕ್ರೇನ್‌ನ ಶೇ 18ರಷ್ಟು ಪ್ರದೇಶವು ರಷ್ಯಾ ನಿಯಂತ್ರಣದಲ್ಲಿದೆ. ಕಳೆದ ವರ್ಷ ಮಾರ್ಚ್‌ 23ರ ಹೊತ್ತಿಗೆ ಶೇ 27ರಷ್ಟು ಪ್ರದೇಶವು ರಷ್ಯಾ ವಶದಲ್ಲಿ ಇತ್ತು. ನಂತರದ ದಿನಗಳಲ್ಲಿ ಹಲವು ಪ್ರದೇಶ
ಗಳನ್ನು ಉಕ್ರೇನ್‌ ಮರಳಿ ವಶಕ್ಕೆ ಪಡೆದಿದೆ.

ಯುದ್ಧಕ್ಕೇನು ಕಾರಣ?

ಉಕ್ರೇನ್‌ ಮೇಲೆ ‘ಸೇನಾ ಕಾರ್ಯಾಚರಣೆ’ ನಡೆಸುವುದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನೀಡಿದ ಕಾರಣಗಳು ಹೀಗಿವೆ: ಉಕ್ರೇನ್‌ ಅನ್ನು ‘ನಾಜಿ ಹಿಡಿತ’ದಿಂದ ಬಿಡಿಸುವುದು, ಆ ದೇಶವನ್ನು ಸೈನ್ಯ ರಹಿತವನ್ನಾಗಿ ಮಾಡುವುದು.

ಉಕ್ರೇನ್‌ನಿಂದ ಬೇರ್ಪಟ್ಟ ಡೊನೆಟ್ಸ್ಕ್‌ ಮತ್ತು ಲುಗಾನ್ಸ್ಕ್‌ ಎಂಬ ಪ್ರದೇಶಗಳನ್ನು ಸಾರ್ವಭೌಮ ದೇಶಗಳು ಎಂದು ರಷ್ಯಾ ಮಾನ್ಯ ಮಾಡಿದೆ. ಈ ದೇಶಗಳ ಮೇಲೆ ಉಕ್ರೇನ್‌ ನಿರಂತರವಾಗಿ ದಾಳಿ ನಡೆಸುತ್ತಿದೆ ಎಂದು ಪುಟಿನ್‌ ಆರೋಪಿಸಿದ್ದಾರೆ.

ಉಕ್ರೇನ್‌ನ ತೀವ್ರ ಬಲಪಂಥೀಯ ಸರ್ಕಾರವು ರಷ್ಯಾ ಮೇಲೆ ದಾಳಿ ನಡೆಸುವ ಅಪಾಯ ಇದೆ. ಜೊತೆಗೆ, ಉಕ್ರೇನ್‌ಗೆ ‍ಪಾಶ್ಚಾತ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಸುತ್ತಿವೆ. ಈ ಎಲ್ಲವನ್ನು ತಡೆಯಲು ‘ಸೇನಾ ಕಾರ್ಯಾಚರಣೆ’ ಅಗತ್ಯ ಎಂದು ಪುಟಿನ್‌ ಪ್ರತಿಪಾದಿಸಿದ್ದಾರೆ.

8,006: ಫೆಬ್ರುವರಿ 15ರವರೆಗೆ ಉಕ್ರೇನ್‌ನಲ್ಲಿ ಯುದ್ಧಕ್ಕೆ ಬಲಿಯಾದ ನಾಗರಿಕರ ಸಂಖ್ಯೆ. ಇದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ನೀಡಿದ ಮಾಹಿತಿ. ಈ ಕಚೇರಿಯು ಅತ್ಯಂತ ನಿಖರವಾದ ವಿಧಾನದ ಮೂಲಕ ಸಾವು ನೋವಿನ ಸಂಖ್ಯೆಯನ್ನು ದೃಢಪಡಿಸಿಕೊಳ್ಳುತ್ತದೆ. ರಷ್ಯಾ ವಶದಲ್ಲಿರುವ ಮರಿಯುಪೋಲ್‌, ಲಿಸಿಚಾನ್ಸ್ಕ್‌, ಸಿವಿರೊಡೊನೆಟ್ಸ್ಕ್‌ನಲ್ಲಿ ಸಾವಿರಾರು ಜನರು ನಾಪತ್ತೆಯಾಗಿರುವುದು ವರದಿಯಾಗಿದೆ. ಈ ಪ್ರಕರಣಗಳು ಇನ್ನಷ್ಟೇ ದೃಢವಾಗಬೇಕಿದೆ

3,382: 2022ರ ಮಾರ್ಚ್‌ನಲ್ಲಿ ಮೃತಪಟ್ಟವರ ಸಂಖ್ಯೆ. ಇದು ಒಂದು ತಿಂಗಳಲ್ಲಿ ಮೃತಪ‍ಟ್ಟ ಜನರ ಗರಿಷ್ಠ ಸಂಖ್ಯೆ

13,287: ಯುದ್ಧದಿಂದಾಗಿ ಗಾಯಗೊಂಡವರ ಸಂಖ್ಯೆ

2,00,000: ಯುದ್ಧದಲ್ಲಿ ಗಾಯಗೊಂಡ ಅಥವಾ ಮೃತಪಟ್ಟ ರಷ್ಯಾದ ಸೈನಿಕರ ಸಂಖ್ಯೆ (ಪಶ್ಚಿಮದ ದೇಶಗಳು ನೀಡಿದ ಮಾಹಿತಿ)

1,00,000: ಯುದ್ಧದಲ್ಲಿ ಗಾಯಗೊಂಡ ಅಥವಾ ಮೃತಪಟ್ಟ ಉಕ್ರೇನ್‌ ಸೈನಿಕರ ಸಂಖ್ಯೆ (ಪಶ್ಚಿಮದ ದೇಶಗಳು ನೀಡಿದ ಮಾಹಿತಿ)

81 ಲಕ್ಷ: ದೇಶ ತೊರೆದು ನಿರಾಶ್ರಿತರಾದ ಉಕ್ರೇನ್‌ ಜನರ ಸಂಖ್ಯೆ

52 ಲಕ್ಷ: ಯುರೋಪ್‌ ಮತ್ತು ಮಧ್ಯ ಏಷ್ಯಾದ 40 ದೇಶಗಳಲ್ಲಿ ಆಶ್ರಯ ಪಡೆದವರ ಸಂಖ್ಯೆ

54 ಲಕ್ಷ: ಜನರು ತಮ್ಮ ಮನೆಯನ್ನು ತೊರೆದಿದ್ದರೂ ಉಕ್ರೇನ್‌ನಲ್ಲಿಯೇ ನಿರಾಶ್ರಿತರಾಗಿ ಉಳಿದಿದ್ದಾರೆ

1.76 ಕೋಟಿ: ಜನರಿಗೆ ಉಕ್ರೇನ್‌ನಲ್ಲಿ ಮಾನವೀಯ ನೆರವು ಬೇಕಾಗಿದೆ

13,800 ಕೋಟಿ ಡಾಲರ್‌ (ಸುಮಾರು ₹11.45 ಲಕ್ಷ ಕೋಟಿ): ಮೂಲಸೌಕರ್ಯ ನಾಶದಿಂದ ಉಕ್ರೇನ್‌ಗೆ ಆಗಿರುವ ನಷ್ಟ

****

ಸ್ವಾತಂತ್ರ್ಯವು ಸುಮ್ಮನೆ ಬರುವುದಿಲ್ಲ. ಅದಕ್ಕಾಗಿ ಹೋರಾಡಬೇಕು. ಉಕ್ರೇನ್‌ನ ಜನರು ಸ್ವಾತಂತ್ರ್ಯಕ್ಕಾಗಿ ಇಂದು ಅತ್ಯಂತ ದಿಟ್ಟವಾಗಿ ಹೋರಾಡುತ್ತಿದ್ದಾರೆ

-ಜೆನ್ಸ್‌ ಸ್ಟಾಲ್‌ಟೆನ್‌ಬರ್ಗ್‌, ನ್ಯಾಟೊ ಪ್ರಧಾನ ಕಾರ್ಯದರ್ಶಿ

****

ಅಪ್ರಚೋದಿತವಾದ ಪೂರ್ಣ ಪ್ರಮಾಣದ ದಾಳಿಯಿಂದಾಗಿ ಉಕ್ರೇನ್‌ನ ಜನರು ಊಹಿಸಲೂ ಆಗದ ರೀತಿಯ ಸಂಕಷ್ಟ ಅನುಭವಿಸಲು ಆರಂಭವಾಗಿ ವರ್ಷವಾಯಿತು

-ಮೂರನೇ ಚಾರ್ಲ್ಸ್‌, ಬ್ರಿಟನ್‌ನ ರಾಜ

****

ಒಂದೇ ಒಂದು ಗುರಿಯನ್ನೂ ಸಾಧಿಸಲು ಪುಟಿನ್‌ಗೆ ಸಾಧ್ಯವಾಗಿಲ್ಲ. ಉಕ್ರೇನ್‌ ಅನ್ನು ನಾಶ ಮಾಡಲು ಬಯಸಿದ್ದರು. ದಿಟ್ಟ ದೇಶವನ್ನು ಎದುರಿಸಬೇಕಾಯಿತು

-ಉರ್ಸುಲಾ ವೊನ್‌ ಡೆರ್‌ ಲೆಯೆನ್‌, ಐರೋಪ್ಯ ಆಯೋಗದ ಅಧ್ಯಕ್ಷೆ

ಆಧಾರ: ರಾಯಿಟರ್ಸ್‌, ಎಪಿ, ಎಎಫ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.