ಘರ್ಷಣೆಯ ಚಿತ್ರ
ಚಿತ್ರಕೃಪೆ: X / @theinformant_x
ಎನ್ಜೆರೆಕೋರ್ (ಗಿನಿಯಾ): ನಗರದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಫುಟ್‌ಬಾಲ್ ಪಂದ್ಯದ ವೇಳೆ ನಡೆದ ಘರ್ಷಣೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಶ್ಚಿಮ ಆಫ್ರಿಕಾ ದೇಶ ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್ಜೆರೆಕೋರ್‌ನಲ್ಲಿ ಲೇಬ್ ಮತ್ತು ಎನ್ಜೆರೆಕೋರ್ ಫುಟ್‌ಬಾಲ್ ತಂಡಗಳ ನಡುವೆ ಪಂದ್ಯ ಆಯೋಜನೆಗೊಂಡಿತ್ತು. ಈ ವೇಳೆ ಎರಡೂ ತಂಡಗಳ ಬೆಂಬಲಿಗರ ನಡುವೆ ಘರ್ಷಣೆಯಾಗಿ, ಇಡೀ ಕ್ರೀಡಾಂಗಣ ರಣಾಂಗಣವಾಗಿ ಬದಲಾಗಿದೆ.
ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ. ಸ್ಥಳೀಯ ಆಸ್ಪತ್ರೆಗಳ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಸುದ್ದಿಸಂಸ್ಥೆ 'ಏಜೆನ್ಸಿ ಫ್ರಾನ್ಸ್ ಪ್ರೆಸ್' (ಎಎಫ್‌ಪಿ), ಸಾವಿನ ಸಂಖ್ಯೆ ನೂರರ ಸನಿಹ ಇದೆ ಎಂದು ವೈದ್ಯರೊಬ್ಬರು ಅಂದಾಜಿಸಿರುವುದಾಗಿ ಪ್ರಕಟಿಸಿದೆ.
ಕ್ರೀಡಾಂಗಣದಲ್ಲಿ ಮತ್ತು ಹೊರಗೆ ಹಿಂಸಾಚಾರ ನಡೆಯುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ನೆಟ್ಟಿಗರು, ಕನಿಷ್ಠ ನೂರು ಮಂದಿ ಮೃತಪಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನ ಮಂತ್ರಿ ಬಾಹ್ ಔರಿ, ಹಿಂಸಾಚಾರವನ್ನು ಖಂಡಿಸಿದ್ದಾರೆ.
'ಲೇಬ್ ಮತ್ತು ಜೆರೆಕೋರ್ ತಂಡಗಳ ನಡುವೆ ಭಾನುವಾರ ಮಧ್ಯಾಹ್ನ ನಡೆಯಬೇಕಿದ್ದ ಪಂದ್ಯವನ್ನು ಹಾಳು ಮಾಡಿದ ಘಟನೆಯನ್ನು ಸರ್ಕಾರ ಖಂಡಿಸುತ್ತದೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಒದಗಿಸಲು ಆಸ್ಪತ್ರೆಗಳಿಗೆ ಯಾರೊಬ್ಬರೂ ಅಡ್ಡಿಪಡಿಸದಂತೆ ಕರೆ ನೀಡುತ್ತದೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಹಿಂಸಾಚಾರಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, 'ಪಂದ್ಯದ ವೇಳೆ ರೆಫ್ರಿ ವಿವಾದಾತ್ಮಕ ತೀರ್ಪು ನೀಡಿದ್ದರು. ಅದರ ಬೆನ್ನಲ್ಲೇ, ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಗಲಾಟೆ ಮಾಡಿದರು. ನಂತರ ಹಿಂಸಾಚಾರ ಭುಗಿಲೆದ್ದಿತು' ಎಂದು ಕ್ರೀಡಾಂಗಣಕ್ಕೆ ಹೋಗಿದ್ದ ಅಭಿಮಾನಿಯೊಬ್ಬರು ಹೇಳಿಕೆ ನೀಡಿರುವುದಾಗಿ 'ಎಎಫ್‌ಪಿ' ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.