ADVERTISEMENT

ಪಾಕಿಸ್ತಾನ: ಸ್ಥಳಾಂತರದ ವೇಳೆ 200ಕ್ಕೂ ಹೆಚ್ಚು ಕೈದಿಗಳು ಪರಾರಿ

ಪಿಟಿಐ
Published 3 ಜೂನ್ 2025, 10:26 IST
Last Updated 3 ಜೂನ್ 2025, 10:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕರಾಚಿ: ಭೂಕಂಪನದ ಮುನ್ಸೂಚನೆ ಕಾರಣದಿಂದ ಕರಾಚಿಯ ಮಾಲೀರ್‌ ಕಾರಾಗೃಹದಿಂದ ಸೋಮವಾರ ರಾತ್ರಿ ಬಂದಿಗಳನ್ನು ಸ್ಥಳಾಂತರಿಸುತ್ತಿದ್ದ ವೇಳೆ ನಡೆದ ಗದ್ದಲದ ಸಂದರ್ಭದಲ್ಲಿ ಕನಿಷ್ಠ 216 ಕೈದಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಘಟನೆಯಲ್ಲಿ ಒಬ್ಬ ಕೈದಿ ಮೃತಪಟ್ಟಿದ್ದು, ಅರೆ ಸೇನಾ ಪಡೆಯ ಮೂವರು ಮತ್ತು ಕಾರಾಗೃಹದ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಯಲ್ಲಿ ಹೇಳಿದೆ.

ADVERTISEMENT

‘ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕರಾಚಿಯಲ್ಲಿ ಹಲವು ಬಾರಿ ಭೂಮಿ ಕಂಪಿಸಿತ್ತು. ಈ ಕಾರಣದಿಂದ 600ಕ್ಕೂ ಹೆಚ್ಚು ಕೈದಿಗಳನ್ನು ಬ್ಯಾರಕ್‌ಗಳಿಂದ ಸ್ಥಳಾಂತರ ಮಾಡಲಾಗಿತ್ತು. ಗದ್ದಲದ ಸಮಯದಲ್ಲಿ 216 ಕೈದಿಗಳು ಪರಾರಿಯಾಗಿದ್ದರು. ತಪ್ಪಿಸಿಕೊಂಡವರ ಪೈಕಿ ಸುಮಾರು 80ಕ್ಕೂ ಹೆಚ್ಚು ಕೈದಿಗಳನ್ನು ಪುನಃ ಬಂಧಿಸಲಾಗಿದೆ’ ಎಂದು ಕಾರಾಗೃಹದ ಅಧೀಕ್ಷಕ ಅರ್ಷದ್ ಶಾ ತಿಳಿಸಿದ್ದಾರೆ.

135ಕ್ಕೂ ಹೆಚ್ಚು ಕೈದಿಗಳು ಇನ್ನೂ ಪತ್ತೆಯಾಗಿಲ್ಲ. ಅವರ ಬಂಧನಕ್ಕೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಪರಾರಿಯಾದ ಕೈದಿಗಳ ಪತ್ತೆಗಾಗಿ ವಿವಿಧ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದರು.

ಘಟನೆಯ ಸಮಯದಲ್ಲಿ ಮಾಲಿರ್ ಜೈಲಿನಲ್ಲಿ 6,000ಕ್ಕೂ ಹೆಚ್ಚು ಕೈದಿಗಳಿದ್ದರು. ಅವರಲ್ಲಿ ಹೆಚ್ಚಿನವರು ಮಾದಕವಸ್ತು ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಜೈಲು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಪಾಕಿಸ್ತಾನ ಭೂಕಂಪ ಮಾಪನಶಾಸ್ತ್ರ ಕೇಂದ್ರದ ಪ್ರಕಾರ, ಭಾನುವಾರದಿಂದ ಕರಾಚಿಯಲ್ಲಿ 16 ಲಘು ಭೂಕಂಪ ಸಂಭವಿಸಿವೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.