ADVERTISEMENT

ಟೈಮ್ಸ್‌ ಸ್ಕ್ವೇರ್‌ನಲ್ಲಿ ಯೋಗ ದಿನಾಚರಣೆ; 3,000ಕ್ಕೂ ಹೆಚ್ಚು ಮಂದಿ ಭಾಗಿ

ಪಿಟಿಐ
Published 21 ಜೂನ್ 2021, 6:01 IST
Last Updated 21 ಜೂನ್ 2021, 6:01 IST
ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿ ಆಯೋಜಿಸಿದ್ದ 7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಯೋಗ ಉತ್ಸಾಹಿಗಳು                 –ಎಎಫ್‌ಪಿ ಚಿತ್ರ
ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿ ಆಯೋಜಿಸಿದ್ದ 7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಯೋಗ ಉತ್ಸಾಹಿಗಳು                 –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಲ್ಲಿನ ಟೈಮ್ಸ್‌ ಸ್ಕ್ವೇರ್‌ನಲ್ಲಿ 3,000ಕ್ಕೂ ಹೆಚ್ಚು ಜನರು ಯೋಗಾಸನಗಳನ್ನು ಮಾಡಿದರು. ಈ ವೇಳೆ ಕೋವಿಡ್‌ ಸಾಂಕ್ರಮಿಕದ ಹಿನ್ನೆಲೆಯಲ್ಲಿ ವೈಯಕ್ತಿಕ ಅಂತರವನ್ನು ಪಾಲಿಸಲಾಯಿತು.

ಅಮೆರಿಕದಲ್ಲಿನ ಭಾರತದ ರಾಜತಾಂತ್ರಿಕರು ಟೈಮ್ಸ್‌ ಸ್ಕ್ವೇರ್‌ ಅಲಾಯನ್ಸ್‌ ಸಹಭಾಗಿತ್ವದಲ್ಲಿ ಭಾನುವಾರ 7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಿದ್ದರು.

ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನವನ್ನು ಟೈಮ್ಸ್ ಸ್ಕ್ವೇರ್‌ನಲ್ಲಿ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಬಾರಿಯ ಯೋಗ ದಿನಾಚರಣೆಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಯೋಗಪಟುಗಳು ಯೋಗ, ಧ್ಯಾನಗಳನ್ನು ಮಾಡಿದರು. ಇದರಲ್ಲಿ ವಿವಿಧ ದೇಶದ ಪ್ರಜೆಗಳು ಕೂಡ ಪಾಲ್ಗೊಂಡಿದ್ದರು. ಟೈಮ್ಸ್ ಸ್ಕ್ವೇರ್‌ನಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳನ್ನು ಕೂಡ ಹಾಕಲಾಗಿತ್ತು.

ADVERTISEMENT

ಡೆಪ್ಯುಟಿ ಕನ್ಸೂಲ್‌ ಜನರಲ್‌ ಶತ್ರುಘ್ನ ಸಿನ್ಹಾ, ಹಿರಿಯ ಅಧಿಕಾರಿಗಳು ಮತ್ತು ಭಾರತೀಯ ಸಂಜಾತ ಅಮೆರಿಕನ್ನರು ಈ ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರು. ಯೋಗ ಗುರು ರುಚಿಕಾ ಲಾಲ್‌ ಅವರು ಈ ಕಾರ್ಯಕ್ರಮವನ್ನು ಮುನ್ನಡೆಸಿದರು.

‘ನಾವು ವಿಶ್ವದ ವಿವಿಧ ಭಾಗಗಳಲ್ಲಿ ಯೋಗವನ್ನು ಆಚರಿಸುತ್ತಿದ್ಧೇವೆ. ಅದರಲ್ಲು ಟೈಮ್ಸ್ ಸ್ಕ್ವೇರ್‌ನ ಯೋಗದಿನಾಚರಣೆ ಬಹಳ ವಿಶೇಷವಾಗಿದೆ. ಯೋಗವು ಸಾರ್ವತ್ರಿಕ ಕಲ್ಪನೆ ಮತ್ತು ಸಾರ್ವತ್ರಿಕ ಚಿಂತನೆ ಮತ್ತು ಸಾರ್ವತ್ರಿಕ ಕ್ರಿಯೆಯಾಗಿದೆ. ಸಾರ್ವತ್ರಿಕ ಚಿಂತನೆಯನ್ನು ಆಚರಿಸಲು ಟೈಮ್ಸ್‌ ಸ್ಕ್ವೇರ್‌ಗಿಂತ ಉತ್ತಮ ಸ್ಥಳ ಬೇರೆ ಯಾವುದು’ ಎಂದು ಭಾರತದ ಕನ್ಸೂಲ್‌ ಜನರಲ್ ರಣಧೀರ್ ಜೈಸ್ವಾಲ್ ಅವರು ಅಭಿಪ್ರಾಯಪಟ್ಟರು.

ಈ ವರ್ಷ ‘ಸ್ವಾಸ್ಥ್ಯಕ್ಕಾಗಿ ಯೋಗ’ ಎಂಬ ಧ್ಯೇಯವಾಕ್ಯದೊಂದಿಗೆ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಈ ವೇಳೆ ಟ್ರೈಬ್ಸ್ ಇಂಡಿಯಾ (ಟ್ರಿಫೆಡ್) ಸೇರಿದಂತೆ ಇತರೆ ಭಾರತೀಯ ಕಂಪನಿಗಳು ಆಯುರ್ವೇದ, ನೈಸರ್ಗಿಕ ಉತ್ಪನ್ನಗಳನ್ನು ಪ್ರದರ್ಶಿಸಿದವು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.