ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸಿ: ಭಾರತ–ಪಾಕ್‌ಗೆ ಅಮೆರಿಕ ಮನವಿ
ನ್ಯೂಯಾರ್ಕ್ / ವಾಷಿಂಗ್ಟನ್: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಉದ್ಭವಿಸಿರುವ ಬಿಕ್ಕಟ್ಟು ಶಮನಕ್ಕೆ ಉಭಯ ರಾಷ್ಟ್ರಗಳು ಪ್ರಯತ್ನಿಸಬೇಕು ಭಾರತ ಹಾಗೂ ಪಾಕಿಸ್ತಾನವನ್ನು ಅಮೆರಿಕ ಕೋರಿದೆ.
ಉಗ್ರವಾದದ ವಿರುದ್ಧ ಸಹಕಾರ ನೀಡುವುದಾಗಿ ಭಾರತಕ್ಕೆ ಸಹಕಾರ ನೀಡುವ ಬದ್ಧತೆಯನ್ನು ಪುನರುಚ್ಚರಿಸಿರುವ ಅಮೆರಿಕ, ಪಹಲ್ಗಾಮ್ ದಾಳಿಯ ತನಿಖೆಗೆ ಸಹಕಾರ ನೀಡಬೇಕು ಎಂದು ಪಾಕಿಸ್ತಾನಕ್ಕೆ ತಿಳಿಸಿದೆ.
ಭಾರತದ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಅವರೊಂದಿಗೆ ಪ್ರತ್ಯೇಕ ದೂರವಾಣಿ ಕರೆಯಲ್ಲಿ ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಬುಧವಾರ ಮಾತುಕತೆ ನಡೆಸಿದ್ದಾರೆ.
ಜೈಶಂಕರ್ ಅವರೊಂದಿಗಿನ ಮಾತುಕತೆಯಲ್ಲಿ, 26 ಮಂದಿಯ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಉಗ್ರವಾದದ ವಿರುದ್ಧದ ಭಾರತಕ್ಕೆ ಸಹಕಾರ ನೀಡುವ ಅಮೆರಿಕದ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ. ಸದ್ಯ ಉಂಟಾಗಿರುವ ಉದ್ವಿಗ್ನತೆ ಶಮನಕ್ಕೆ, ಶಾಂತಿ ಕಾಪಾಡಲು ಹಾಗೂ ಭದ್ರತೆಗೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ಎಂದು ರುಬಿಯೊ ಸಲಹೆ ನೀಡಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಟಾಮಿ ಬ್ರೂಸ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶರೀಫ್ ಅವರೊಂದಿಗಿನ ಸಂಭಾಷಣೆಯಲ್ಲಿ, ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸುವ ಅಗತ್ಯತೆಯ ಬಗ್ಗೆ ರೂಬಿಯೊ ಮಾತನಾಡಿದ್ದಾರೆ. ಮತ್ತು ದಾಳಿಯ ತನಿಖೆಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಸಹಾಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಉದ್ವಿಗ್ನತೆಯನ್ನು ಕಡಿಮೆ ಮಾಡಲು, ನೇರ ಮಾತುಕತೆ ಮರುಸ್ಥಾಪಿಸಲು ಮತ್ತು ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದೊಂದಿಗೆ ಕೆಲಸ ಮಾಡಬೇಕು ಎಂದು ಪಾಕಿಸ್ತಾನಕ್ಕೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.