ಇಸ್ಲಾಮಾಬಾದ್: ‘ಪಹಲ್ಗಾಮ್ ದಾಳಿಯನ್ನು ‘ದಿ ರೆಸಿಸ್ಟೆನ್ಸ್ ಫ್ರಂಟ್’(ಟಿಆರ್‌ಎಫ್) ನಡೆಸಿದೆ ಎಂಬುದಕ್ಕೆ ಪುರಾವೆ ತೋರಿಸಿ’ ಎಂದು ಹೇಳಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ಡಾರ್, ಉಗ್ರ ಸಂಘಟನೆಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.
ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡಿದ್ದ ಲಷ್ಕರ್–ಎ–ತಯಬಾದ ಅಧೀನ ಸಂಘಟನೆ, ಪಾಕಿಸ್ತಾನ ಮೂಲದ ‘ದಿ ರೆಸಿಸ್ಟೆನ್ಸ್ ಫ್ರಂಟ್’ಅನ್ನು (ಟಿಆರ್‌ಎಫ್) ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ ಡಾರ್, ‘ನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ(ಯುಎನ್‌ಎಸ್‌ಸಿ) ಖಾಯಂ ಸದಸ್ಯರಲ್ಲ. ಟಿಆರ್‌ಎಫ್ ಅನ್ನು ‘ಭಯೋತ್ಪಾದಕ ಸಂಘಟನೆ’ ಎಂದು ನಾವು ಪರಿಗಣಿಸುವುದಿಲ್ಲ. ಪಹಲ್ಗಾಮ್ ದಾಳಿಯನ್ನು ಟಿಆರ್‌ಎಫ್ ನಡೆಸಿದೆ ಎಂಬುದಕ್ಕೆ ಪುರಾವೆ ತೋರಿಸಿ. ಇಲ್ಲವಾದಲ್ಲಿ ಯುಎನ್‌ಎಸ್‌ಸಿ ಪತ್ರಿಕಾ ಪ್ರಕಟಣೆಯಿಂದ ‘ಭಯೋತ್ಪಾದಕ ಸಂಘಟನೆ’ ಎಂಬುವುದನ್ನು ಅಳಿಸಿ ಹಾಕಿ’ ಎಂದಿದ್ದಾರೆ.
ಟಿಆರ್‌ಎಫ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ (ಎಫ್‌ಟಿಒ) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ (ಎಸ್‌ಡಿಜಿಟಿ) ಸಂಘಟನೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೆಸರಿಸುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದರು.
ಟಿಆರ್‌ಎಫ್ ವಿರುದ್ಧದ ಈ ಕ್ರಮವು ‘ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಕಾಪಾಡುವಲ್ಲಿ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಟ್ರಂಪ್ ಆಡಳಿತದ ಬದ್ಧತೆಯನ್ನು ತೋರಿಸುತ್ತದೆ’ ಎಂದು ರುಬಿಯೊ ಹೇಳಿದ್ದರು.
‘ಪಹಲ್ಗಾಮ್ ದಾಳಿಯು ಎಲ್ಇಟಿ ನಡೆಸಿದ 2008ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರನ್ನು ಗುರಿಯಾಗಿಸಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಭಾರತದ ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಡೆದ ಹಲವಾರು ದಾಳಿಗಳ ಹೊಣೆಯನ್ನೂ ಟಿಆರ್‌ಎಫ್ ಹೊತ್ತುಕೊಂಡಿದೆ’ ಎಂದು ತಿಳಿಸಿದ್ದರು.
‘ದಿ ರೆಸಿಸ್ಟೆನ್ಸ್ ಫ್ರಂಟ್’ ಮೊದಲು ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡಿತ್ತಾದರೂ, ನಂತರ ಪಾಕಿಸ್ತಾನ–ಭಾರತದ ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಾಗ ತನ್ನ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿತ್ತು.
ಪಹಲ್ಗಾಮ್ ದಾಳಿ: ಎಲ್‌ಇಟಿ ಪಾತ್ರ ತಳ್ಳಿಹಾಕಿದ ಪಾಕ್
‘ದೇಶದಲ್ಲಿ ಭಯೋತ್ಪಾದನೆಯ ಜಾಲವನ್ನು ಸಂಪೂರ್ಣ ಮಟ್ಟಹಾಕಲಾಗಿದ್ದು, ಸದ್ಯ ನಿಷ್ಕ್ರಿಯಗೊಂಡಿರುವ ಲಷ್ಕರ್ –ಎ– ತಯಬಾ (ಎಲ್‌ಇಟಿ) ಸಂಘಟನೆಯೊಂದಿಗೆ ಭಾರತವು ಪಹಲ್ಗಾಮ್ ದಾಳಿಗೆ ಸಂಬಂಧ ಕಲ್ಪಿಸುತ್ತಿರುವುದು ವಾಸ್ತವಕ್ಕೆ ವಿರುದ್ಧವಾಗಿದೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿದೆ.
‘ಪಾಕಿಸ್ತಾನವು ಪರಿಣಾಕಾರಿಯಾಗಿ ಮತ್ತು ಸಮಗ್ರವಾಗಿ ಭಯೋತ್ಪಾದನೆಯನ್ನು ನಿಷ್ಕ್ರಿಯಗೊಳಿಸಿದೆ. ಭಯೋತ್ಪಾದಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಉಗ್ರರ ಗುಂಪುಗಳನ್ನು ನಿರ್ಮೂಲನೆ ಮಾಡಲಾಗಿದ್ದು, ಭಯೋತ್ಪಾದನೆ ವಿರುದ್ಧ ಶೂನ್ಯ ಸಹನೆ ನೀತಿಯನ್ನು ಹೊಂದಿದೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.