ಅಸಿಂ ಮುನೀರ್ ಮತ್ತು ಡೊನಾಲ್ಡ್ ಟ್ರಂಪ್
ರಾಯಿಟರ್ಸ್ ಚಿತ್ರಗಳು
ವಾಷಿಂಗ್ಟನ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತ ಭವನದಲ್ಲಿ ಬುಧವಾರ ಔತಣಕೂಟ ಆಯೋಜಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಶ್ವೇತ ಭವನ, ‘ಬುಧವಾರದ ಮಧ್ಯಾಹ್ನದ ಭೋಜನವನ್ನು ಟ್ರಂಪ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರೊಂದಿಗೆ ಮಾಡಲಿದ್ದಾರೆ’ ಎಂದಿದೆ.
ಶ್ವೇತಭವನದ ಸಂಪುಟ ಕೋಣೆಯಲ್ಲಿ ಅಮೆರಿಕದ ಕಾಲಮಾನ ಪ್ರಕಾರ ಮಧ್ಯಾಹ್ನ 1ಕ್ಕೆ ಭೋಜನಕೂಟ ಆಯೋಜನೆಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ಉಂಟಾಗಿರುವ ಬಿಕ್ಕಟ್ಟಿನ ಬೆನ್ನಲ್ಲೇ ಕೆನಡಾದಲ್ಲಿ ಆಯೋಜನೆಗೊಂಡಿರುವ ಜಿ7 ರಾಷ್ಟ್ರಗಳ ಶೃಂಗವನ್ನು ಟ್ರಂಪ್ ಅರ್ಧಕ್ಕೆ ಮೊಟಕುಗೊಳಿಸಿದ್ದರು. ಬುಧವಾರ ಬೆಳಿಗ್ಗೆ ಅವರು ಅಮೆರಿಕಕ್ಕೆ ಮರಳಿದ್ದಾರೆ.
ಫೀಲ್ಡ್ ಮಾರ್ಶಲ್ ಮುನೀರ್ ಅವರನ್ನು ಶ್ವೇತಭವನದ ಔತಣಕೂಟಕ್ಕೆ ಆಹ್ವಾನಿಸಿರುವುದು ಪಾಕಿಸ್ತಾನದ ಪಾಲಿಗೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ಎಂದು ಪಾಕಿಸ್ತಾನದ ಸುದ್ದಿ ಪತ್ರಿಕೆ ಡಾನ್ ವಿಶ್ಲೇಷಿಸಿದೆ. ಭಾರತವು ಪ್ರಾಬಲ್ಯ ಮೆರೆಯುವ ರಾಷ್ಟ್ರ ಎಂದು ಪರಿಗಣಿಸುವ ಬದಲು ಅದೊಂದು ಸುಸಂಸ್ಕೃತ ದೇಶ ಎಂದು ಪರಿಗಣಿಸಿ ವರ್ತಿಸಬೇಕು ಎಂದೂ ಪತ್ರಿಕೆ ಬರೆದಿದೆ.
ಮುನೀರ್ ಅವರು ಅಮೆರಿಕದಲ್ಲಿನ ಪಾಕಿಸ್ತಾನ ನಾಗರಿಕರನ್ನು ಉದ್ದೇಶಿಸಿ ಮಾತನಾಡಿ, ‘ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ. ಈ ಯುದ್ಧ ತಕ್ಷಣದಿಂದಲೇ ಕೊನೆಗೊಳ್ಳಬೇಕು ಎಂದಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಅವರು ಇತ್ತೀಚೆಗೆ ಪಂಚತಾರಾ ಗೌರವಕ್ಕೆ ಪಾತ್ರರಾಗಿದ್ದಾರೆ. ಪಾಕಿಸ್ತಾನ ಸೇನೆಯಲ್ಲಿ ಉನ್ನತ ಬಡ್ತಿ ಇದಾಗಿದ್ದು, 1959ರಲ್ಲಿ ಆಯೂಬ್ ಖಾನ್ ಅವರಿಗೆ ಇದು ಲಭಿಸಿತ್ತು.
‘ಅಂತರರಾಷ್ಟ್ರೀಯ ಗಡಿಯನ್ನು ಮೀರುವ ಮೂಲಕ ಹೊಸ ಮಾದರಿಯ ಅಪಾಯಕಾರಿ ನೀತಿಗೆ ಭಾರತ ಮುಂದಾಗಿದೆ. ಇದನ್ನು ಪಾಕಿಸ್ತಾನ ಖಡಾಖಂಡಿತವಾಗಿ ತಿರಸ್ಕರಿಸಿದೆ’ ಎಂದು ಪತ್ರಿಕೆ ವರದಿ ಮಾಡಿದೆ.
ಏ. 22ರಂದು ಸಂಭವಿಸಿದ ಪಹಲ್ಗಾಮ್ ದುರ್ಘಟನೆಯ ನಂತರ ಮೇ 7ರಂದು ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಸೇನಾ ಕಾರ್ಯಾಚರಣೆ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ ನಾಶಪಡಿಸಿತ್ತು. ಇದು ಉಭಯ ರಾಷ್ಟ್ರಗಳ ನಡುವೆ ಸೇನಾ ಸಂಘರ್ಷಕ್ಕೆ ಕಾರಣವಾಗಿತ್ತು. ಉಭಯ ರಾಷ್ಟ್ರಗಳ ಸೇನಾ ಮುಖ್ಯಸ್ಥರ ಸಭೆಯ ನಂತರ ಮೇ 10ರಂದು ಕದನ ವಿರಾಮ ಘೋಷಣೆಯಾಯಿತು.
ವಾಷಿಂಗ್ಟನ್‌ನಲ್ಲಿರುವ ಫೋರ್ ಸೀಸನ್ಸ್ ಹೋಟೆಲಿನಲ್ಲಿ ಪಾಕಿಸ್ತಾನ ನಾಗರಿಕರೊಂದಿಗೆ ಮುನೀರ್ ಸಮಾಲೋಚನೆ ನಡೆಸಿದರು. ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಹೋಟೆಲಿನ ಹೊರಭಾಗದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರೀಕ್ ಎ ಇನ್‌ಸಾಫ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರಜಾಪ್ರಭುತ್ವ ಸುಧಾರಣೆಗಳನ್ನು ಜಾರಿಗೆ ತರಲು ಮತ್ತು ತಮ್ಮ ನಾಯಕನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಇಸ್ರೇಲ್ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷದಲ್ಲಿ ತಾನು ಇರಾನ್ ಪರವಾಗಿ ನಿಲ್ಲುವುದಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್ ಸ್ಪಷ್ಟಪಡಿಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಗುಂಪು ಸಹಿತ ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕದೊಂದಿಗೆ ನಿಲ್ಲುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.