ನ್ಯೂಯಾರ್ಕ್: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ವಿಚಾರವು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಈ ಕುರಿತು ಮಂಡಳಿಯ ಸದಸ್ಯ ರಾಷ್ಟ್ರಗಳು ಕಠಿಣ ಪ್ರಶ್ನೆಗಳನ್ನು ಕೇಳುವ ಮೂಲಕ ಪಾಕಿಸ್ತಾನವನ್ಜು ತರಾಟೆಗೆ ತೆಗೆದುಕೊಂಡಿವೆ.
26 ಜನರನ್ನು ಬಲಿ ತೆಗೆದುಕೊಂಡ ಈ ದಾಳಿಗೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿರುವ ಜೊತೆಗೆ, ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೂಡ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿರುವುದು ಗಮನಾರ್ಹ.
ಮುಖ್ಯ ಸಭಾಂಗಣದ ಬದಲಾಗಿ ಸಮಾಲೋಚನೆಗೆ ಮೀಸಲಾದ ಕೊಠಡಿಯೊಂದರಲ್ಲಿ ಮಂಡಳಿಯ ಸಭೆ ನಡೆದಿದೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಸಂಬಂಧಿಸಿ ಮಂಡಳಿಯ ಸದಸ್ಯ ರಾಷ್ಟ್ರಗಳು ತನಗೆ ಅನುಕೂಲಕರವಾದ ನಿಲುವು ಪ್ರಕಟಿಸಬೇಕು ಎಂಬ ದೃಷ್ಟಿಯಿಂದ ಪಾಕಿಸ್ತಾನ ನಡೆಸಿದ ಪ್ರಯತ್ನವು ಫಲ ನೀಡಿಲ್ಲ.
ಸಭೆ ಬಳಿಕ ಭದ್ರತಾ ಮಂಡಳಿಯು ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಲು ನಿರಾಕರಿಸಿತು. ಆದರೆ, ತನ್ನ ಉದ್ದೇಶ ಈಡೇರಿದಂತಾಗಿದೆ ಎಂದು ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ.
15 ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳಾಗಿವೆ. ಪಾಕಿಸ್ತಾನವು ಮಂಡಳಿಯ ಕಾಯಂ ಅಲ್ಲದ ಸದಸ್ಯ ರಾಷ್ಟ್ರ.
ಮೇ ತಿಂಗಳಿಗೆ ಸಂಬಂಧಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನವನ್ನು ಗ್ರೀಸ್ ದೇಶ ವಹಿಸಿಕೊಂಡಿದೆ. ಪಾಕಿಸ್ತಾನದ ಮನವಿ ಮೇರೆಗೆ ಗ್ರೀಸ್ ಈ ಸಭೆ ಕರೆದಿತ್ತು.
‘ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸಭೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಈ ದುಷ್ಕೃತ್ಯಕ್ಕೆ ಸಂಬಂಧಿಸಿ ಹೊಣೆಗಾರಿಕೆ ನಿಗದಿ ಮಾಡಬೇಕು ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು’ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
‘ಈ ಔಪಚಾರಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಪಾಕಿಸ್ತಾನಕ್ಕೆ ಹಲವು ಕಠಿಣ ಪ್ರಶ್ನೆಗಳನ್ನು ಕೇಳಿದರು. ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿದರು’ ಎಂದು ಈ ಮೂಲಗಳು ಹೇಳಿವೆ.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಂತರ ಉದ್ಭವಿಸಿರುವ ಪರಿಸ್ಥಿತಿ ಕುರಿತು ಟುನಿಷಿಯಾದ ಖಾಲಿದ್ ಮೊಹಮದ್ ಖಿಯಾರಿ ಅವರು ಭದ್ರತಾ ಮಂಡಳಿ ಸಭೆಗೆ ಮಾಹಿತಿ ನೀಡಿದರು.
ಖಿಯಾರಿ ಅವರು ಮಧ್ಯಪ್ರಾಚ್ಯ, ಏಷ್ಯಾ ಹಾಗೂ ಪೆಸಿಫಿಕ್ ರಾಷ್ಟ್ರಗಳಿಗೆ ಸಂಬಂಧಿಸಿದ ರಾಜಕೀಯ ಹಾಗೂ ಶಾಂತಿಸ್ಥಾಪನೆ ಕುರಿತ ಕಾರ್ಯಾಚರಣೆ ವಿಭಾಗದ ಸಹಾಯಕ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಸಭೆ ಬಳಿಕ ಮಾತನಾಡಿದ ಅವರು, ‘ಈ ಬಿಕ್ಕಟ್ಟನ್ನು ಮಾತುಕತೆ ಹಾಗೂ ಶಾಂತಿಯುತ ಮಾರ್ಗದ ಮೂಲಕ ಬಗೆಹರಿಸಿಕೊಳ್ಳುವಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ಸಲಹೆ ನೀಡಲಾಗಿದೆ. ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.