ADVERTISEMENT

ಲಿಖಿತ ಪ್ರತಿಕ್ರಿಯೆ ಸಲ್ಲಿಸಲು ಪಾಕ್‌ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ನವಾಜ್‌ ಶರೀಫ್‌ ವಿರುದ್ಧದ ದೇಶದ್ರೋಹ ಆಪಾದನೆ ಪ್ರಕರಣದ ವಿಚಾರಣೆ

ಪಿಟಿಐ
Published 8 ಅಕ್ಟೋಬರ್ 2018, 20:17 IST
Last Updated 8 ಅಕ್ಟೋಬರ್ 2018, 20:17 IST
ನವಾಜ್‌ ಶರೀಫ್‌
ನವಾಜ್‌ ಶರೀಫ್‌   

ಲಾಹೋರ್‌: 2008ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನದವರು ಭಾಗಿಯಾಗಿದ್ದಾರೆಂದು ಹೇಳಿಕೆ ನೀಡಿದ ಪದಚ್ಯುತ ಪ್ರಧಾನಿ ನವಾಜ್‌ ಶರೀಫ್‌ ವಿರುದ್ಧದ ದೇಶದ್ರೋಹ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಲಾಹೋರ್‌ ಹೈಕೋರ್ಟ್‌, ಇದೇ 22ರೊಳಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ.

ಡಾನ್‌ ಪತ್ರಿಕೆಯ ಖ್ಯಾತ ಪತ್ರಕರ್ತರಾದ ಸಿರಿಲ್‌ ಅಲ್ಮೇಡಾ ಜತೆಗೆ ಪದಚ್ಯುತ ಪ್ರಧಾನಿಗಳಾದ ನವಾಜ್‌ ಶರೀಫ್‌ ಮತ್ತು ಶಾಹಿದ್‌ ಖಾಕನ್‌ ಅಬ್ಬಾಸಿ ಅವರು ಹೈಕೋರ್ಟ್‌ನ ಪೂರ್ಣ ಪ್ರಮಾಣದ ಪೀಠದ ಎದುರು ವಿಚಾರಣೆಗೆ ಹಾಜರಾದರು.

ನ್ಯಾಯಮೂರ್ತಿ ಮಝಹರ್ ಅಲಿ ನಖ್ವಿ ಅವರ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಪತ್ರಕರ್ತ ಸಿರಿಲ್‌ ಅಲ್ಮೇಡಾ ಕೂಡ ಪ್ರತಿವಾದಿಯಾಗಿದ್ದಾರೆ.

ADVERTISEMENT

ಶರೀಫ್‌, ಅಬ್ಬಾಸಿ ಮತ್ತು ಅಲ್ಮೇಡಾ ಅವರಿಗೆ ನ್ಯಾಯ ಪೀಠವು ಮುಂದಿನ ವಿಚಾರಣೆ ವೇಳೆಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸುವಂತೆಯೂ ಆದೇಶ ನೀಡಿದೆ.

‘ಕ್ರಮ ತೆಗೆದುಕೊಳ್ಳಬೇಕಾದುದು ಸರ್ಕಾರದ ಕೆಲಸ. ಇದುವರೆಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಪ್ರಶ್ನಿಸಿದ ಪೀಠದ ಸದಸ್ಯರಾದ ನ್ಯಾಯಮೂರ್ತಿ ಜಹಾಂಗೀರ್‌, ರಾಜದ್ರೋಹ ಪ್ರಕರಣದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ಉಪ ಅಟಾರ್ನಿ ಜನರಲ್ ಮಿಯಾನ್ ತಾರಿಕ್ ಅವರನ್ನೂ ವಿಚಾರಣೆಗೆ ಒಳಪಡಿಸಿದರು.

ವಿಮಾನ ಪ್ರಯಾಣ ನಿಷೇಧ ಪಟ್ಟಿಯಿಂದ (ನೋ ಫ್ಲೈ ಲಿಸ್ಟ್‌) ಅಲ್ಮೇಡಾ ಅವರನ್ನು ಕೈಬಿಡುವಂತೆ ಆದೇಶ ನೀಡಿದ ಪೀಠವು, ಅವರ ಮೇಲೆ ಜಾರಿಗೊಳಿಸಿದ್ದ ಜಾಮೀನು ರಹಿತ ಬಂಧನ ಆದೇಶ ಕೂಡ ವಾಪಸ್‌ ಪಡೆಯಿತು.

ಕಳೆದ ವರ್ಷದ ಮೇನಲ್ಲಿ ನವಾಜ್‌ ಶರೀಫ್‌ ಅವರನ್ನು ಡಾನ್‌ ಪತ್ರಿಕೆ ಸಂದರ್ಶನ ನಡೆಸಿತ್ತು. ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ವ್ಯಕ್ತಿಗಳು ಭಾಗಿಯಾಗಿರುವುದಾಗಿ ಶರೀಪ್‌ ಸಂದರ್ಶನದಲ್ಲಿ ಹೇಳಿದ್ದರು.

ಪದಚ್ಯುತ ಪ್ರಧಾನಿ ನೀಡಿದ ದೇಶವನ್ನು ‘ತಪ್ಪು ದಾರಿಗೆಳೆಯುವ’ ಹೇಳಿಕೆ ಬಗ್ಗೆ ಚರ್ಚಿಸಲು ರಾಷ್ಟ್ರೀಯ ಭದ್ರತಾ ಸಮಿತಿ (ಎನ್ಎಸ್‌ಸಿ) ಸಭೆ ನಡೆಸಿದಾಗ ಆಗಿನ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಅವರು, ಶರೀಫ್ ಅವರನ್ನು ಭೇಟಿ ಮಾಡಿದ್ದರು.

ಸಾರ್ವಜನಿಕ ಕೆಲಸದಲ್ಲಿ ವೈಯಕ್ತಿಕ ಪ್ರಭಾವ ಬೀರುವುದಿಲ್ಲವೆಂಬ ಪ್ರಮಾಣ ವಚನವನ್ನು ಅಬ್ಬಾಸಿ ಕೂಡ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ನಾಗರಿಕ ಸಂಘಟನೆ ಹೋರಾಟಗಾರ್ತಿ ಅಮಿನಾ ಮಲಿಕ್‌ ಇವರ ವಿರುದ್ಧ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.