ADVERTISEMENT

ಮತ್ತೆ ಶಾಲಾ– ಕಾಲೇಜು ಮುಚ್ಚುವ ಯೋಚನೆ ಇಲ್ಲ: ಪಾಕ್‌ ಸಚಿವ

ಪಿಟಿಐ
Published 9 ಅಕ್ಟೋಬರ್ 2020, 7:54 IST
Last Updated 9 ಅಕ್ಟೋಬರ್ 2020, 7:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ‘ಕೋವಿಡ್‌ ಹಿನ್ನೆಲೆಯಲ್ಲಿಮತ್ತೊಮ್ಮೆ ಶಾಲೆ, ಕಾಲೇಜುಗಳನ್ನು ಮುಚ್ಚುವ ಆಲೋಚನೆಯೇ ಇಲ್ಲ’ ಎಂದು ಪಾಕಿಸ್ತಾನದ ಶಿಕ್ಷಣ ಸಚಿವ ಶಫಾಕತ್‌ ಮಹಮೂದ್‌ ಗುರುವಾರ ಸ್ಪಷ್ಟಪಡಿಸಿದ್ದಾರೆ.‌

ಚಳಿಗಾಲದಲ್ಲಿ ವೇಗವಾಗಿ ಸೋಂಕು ಪಸರಿಸುವ ಸಾಧ್ಯತೆ ಇದೆ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಭಾನುವಾರ ಎಚ್ಚರಿಸಿದ್ದರು.

ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಸುಮಾರು ಆರು ತಿಂಗಳ ಕಾಲ ಶಿಕ್ಷಣ ಸಂಸ್ಥೆಗಳಿಗೆ ಬೀಗ ಹಾಕಲಾಗಿತ್ತು. ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಳೆದ ತಿಂಗಳು ಶಾಲೆ ಹಾಗೂ ಕಾಲೇಜುಗಳನ್ನು ಪುನರಾರಂಭಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ADVERTISEMENT

‘ಅಲ್ಲಾಹುವಿನ ಕೃಪೆಯಿಂದಾಗಿ ನಮ್ಮ ಮಕ್ಕಳನ್ನು ಮತ್ತೆ ಶಾಲೆಗಳಿಗೆ ಕಳುಹಿಸುವಂತಾಗಿದೆ. ಕೊರೊನಾ ಸೋಂಕಿನ ಭೀತಿಯಿಂದಾಗಿ ಶಾಲೆ, ಕಾಲೇಜುಗಳಿಗೆ ಬೀಗ ಹಾಕಲು ತೀರ್ಮಾನಿಸಲಾಗಿತ್ತು. ಅದೊಂದು ಅತ್ಯುತ್ತಮ ನಿರ್ಧಾರ. ಈಗ ಮತ್ತೊಮ್ಮೆ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವ ಆಲೋಚನೆಯೇ ಇಲ್ಲ’ ಎಂದು ಶಫಾಕತ್‌ ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ಸ್ವಲ್ಪ ಏರಿದೆ ಎಂದು ನ್ಯಾಷನಲ್‌ ಕಮಾಂಡ್‌ ಆ್ಯಂಡ್‌ ಆಪರೇಷನ್‌ ಸೆಂಟರ್‌ (ಎನ್‌ಸಿಒಸಿ) ಗುರುವಾರ ಹೇಳಿತ್ತು. ಹೀಗಾಗಿ ಶಾಲೆ, ಕಾಲೇಜುಗಳನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಶಫಾಕತ್‌ ಅವರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

‘ಶುಕ್ರವಾರ ಬೆಳಿಗ್ಗೆ ಎಂಟು ಗಂಟೆವರೆಗಿನ ಹಿಂದಿನ 24 ತಾಸುಗಳಲ್ಲಿ ಹೊಸದಾಗಿ 661 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆಯು 3.17 ಲಕ್ಷಕ್ಕೆ ಏರಿದೆ’ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮತ್ತೆ ಎಂಟು ಮಂದಿ ಕೋವಿಡ್‌ಗೆ ಬಲಿಯಾಗಿರುವುದರಿಂದ ಮೃತರ ಸಂಖ್ಯೆ 6,552ಕ್ಕೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.