ADVERTISEMENT

ವಿಶ್ವದ ಒಂಟಿ ಆನೆ ಎಂದೇ ಖ್ಯಾತವಾದ ಕಾವನ್‌ ಕಾಂಬೋಡಿಯಾಗೆ ಸ್ಥಳಾಂತರ

ಪಿಟಿಐ
Published 28 ನವೆಂಬರ್ 2020, 14:28 IST
Last Updated 28 ನವೆಂಬರ್ 2020, 14:28 IST
ಕಾವನ್‌
ಕಾವನ್‌   

ಇಸ್ಲಾಮಾಬಾದ್‌: ವಿಶ್ವದ ಒಂಟಿ ಆನೆ ಎಂದೇ ಕರೆಯಲಾಗುತ್ತಿದ್ದ ಕಾವನ್‌ ಎಂಬ ಆನೆಯನ್ನು ಪಾಕಿಸ್ತಾನದ ಮೃಗಾಲಯದಿಂದ ನ.29ರಂದು ಕಾಂಬೋಡಿಯಾಗೆ ಸ್ಥಳಾಂತರಿಸಲಾಗುತ್ತಿದ್ದು, ಈ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದ್ದ ಅಮೆರಿಕದ ಗಾಯಕಿ ಷೆರ್‌ ಅವರಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಅಭಿನಂದಿಸಿದ್ದಾರೆ.

ಕಾವನ್‌ ಇದ್ದ ಇಸ್ಲಾಮಾಬಾದ್‌ನ ಮೃಗಾಲಯದ ಸ್ಥಿತಿಯು ಹದಗೆಟ್ಟ ಸಂದರ್ಭದಲ್ಲಿ, 35 ವರ್ಷದ ಈ ಆನೆಯು ವಿಶ್ವದ ಗಮನ ಸೆಳೆದಿತ್ತು. 1985ರಲ್ಲಿ ಶ್ರೀಲಂಕಾದಲ್ಲಿ ಹುಟ್ಟಿದ್ದ ಈ ಆನೆಯನ್ನು, ಅಂದಿನ ಪಾಕಿಸ್ತಾನದ ರಾಷ್ಟ್ರಪತಿಗೆ ಶ್ರೀಲಂಕಾ ಸರ್ಕಾರವು ಕೊಡುಗೆಯಾಗಿ ನೀಡಿತ್ತು. 1990ರಲ್ಲಿ ಬಾಂಗ್ಲಾದೇಶದಿಂದ ಸಾಹ್ಲಿ ಎಂಬ ಆನೆಯನ್ನು ಕರೆತಂದು ಕಾವನ್‌ ಇದ್ದ ಮೃಗಾಲಯದಲ್ಲಿ ಸಾಕಲಾಗಿತ್ತು. 2012ರಲ್ಲಿ ಸಾಹ್ಲಿ ಮೃತಪಟ್ಟಿತ್ತು. ನಂತರದಲ್ಲಿ ಈ ಆನೆ ಒಂಟಿಯಾಗಿಯೇ ಇತ್ತು. ವನ್ಯಜೀವಿ ಹಕ್ಕುಗಳ ಹೋರಾಟಗಾರರು ಈ ಆನೆ ಹಾಗೂ ಮೃಗಾಲಯದಲ್ಲಿರುವ ಇತರೆ ಪ್ರಾಣಿಗಳನ್ನು ಬೇರೆ ಮೃಗಾಲಯಕ್ಕೆ ಸ್ಥಳಾಂತರಿಸುವ ಅಭಿಯಾನ ಮಾಡಿದ್ದರು.

ಮೇ 21ರಂದು ಇಸ್ಲಾಮಾಬಾದ್‌ ಹೈಕೋರ್ಟ್‌, ಕಾವನ್‌ ಸೇರಿದಂತೆ ಮೃಗಾಲಯದಲ್ಲಿರುವ ಎಲ್ಲ ಪ್ರಾಣಿಗಳ ಸ್ಥಳಾಂತರಕ್ಕೆ ಆದೇಶಿಸಿತ್ತು. ಕಳೆದ ಸೋಮವಾರ ಕಾವನ್‌ ಸ್ಥಳಾಂತರಕ್ಕೆ ಪಾಕಿಸ್ತಾನ ಸರ್ಕಾವು ಒಪ್ಪಿಗೆ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.