ADVERTISEMENT

ಸಿಂಧೂ ಜಲ ಒಪ್ಪಂದ ಅಮಾನತು: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕ್‌ PM ಪ್ರಸ್ತಾಪ

ಪಿಟಿಐ
Published 30 ಮೇ 2025, 14:52 IST
Last Updated 30 ಮೇ 2025, 14:52 IST
ಶೆಹಬಾಜ್‌ ಷರೀಫ್
ಶೆಹಬಾಜ್‌ ಷರೀಫ್   

ಇಸ್ಲಾಮಾಬಾದ್: ರಾಜಕೀಯ ಲಾಭಕ್ಕಾಗಿ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸಿ ಲಕ್ಷಾಂತರ ಮಂದಿಯ ಜೀವವನ್ನು ಅಪಾಯಕ್ಕೆ ಸಿಲುಕಿಸಲು ಭಾರತಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಎಚ್ಚರಿಸಿದ್ದಾರೆ.

ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆದ ಹಿಮನದಿಗಳ ಸಂರಕ್ಷಣೆ ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುವಾಗ ಷರೀಫ್‌ ಅವರು ಸಿಂಧೂ ಜಲ ಒಪ್ಪಂದದ (ಐಡಬ್ಲ್ಯುಟಿ) ವಿಷಯವನ್ನು ಪ್ರಸ್ತಾಪಿಸಿದ್ದಾರೆ.

‘ಸಿಂಧೂ ನದಿ ಜಲಾನಯನ ಪ್ರದೇಶದ ನೀರಿನ ಹಂಚಿಕೆಯನ್ನು ನಿರ್ಧರಿಸುವ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸುವ ಭಾರತದ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮ ವಿಷಾದಕರ‘ ಎಂದು ಶರೀಫ್ ಅವರು ಹೇಳಿರುವುದಾಗಿ ‘ಡಾನ್’ ವರದಿ ಮಾಡಿದೆ.

ADVERTISEMENT

‘ರಾಜಕೀಯ ಲಾಭಕ್ಕಾಗಿ ಲಕ್ಷಾಂತರ ಜೀವಗಳನ್ನು ಅಪಾಯಕ್ಕೆ ಸಿಲುಕಿಸಬಾರದು ಮತ್ತು ಪಾಕಿಸ್ತಾನವು ಅದಕ್ಕೆ ಅವಕಾಶ ನೀಡುವುದಿಲ್ಲ. ಒಪ್ಪಂದದ ಎಲ್ಲೆಯನ್ನು ಮೀರಲು ನಾವು ಎಂದಿಗೂ ಬಿಡುವುದಿಲ್ಲ’ ಎಂದು ವಿಶ್ವಸಂಸ್ಥೆಯ 80 ಸದಸ್ಯ ರಾಷ್ಟ್ರಗಳು ಮತ್ತು 70 ಅಂತರರಾಷ್ಟ್ರೀಯ ಸಂಸ್ಥೆಗಳ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಸಮ್ಮೇಳನದಲ್ಲಿ ಅವರು ಹೇಳಿದ್ದಾರೆ. 

ಈ ‌ಸಮ್ಮೇಳನವನ್ನು ತಜಿಕಿಸ್ತಾನ ಸರ್ಕಾರವು ವಿಶ್ವಸಂಸ್ಥೆ, ಯುನೆಸ್ಕೊ, ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಮತ್ತು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನ ಸಹಯೋಗದೊಂದಿಗೆ ಆಯೋಜಿಸಿತ್ತು.

ಏಪ್ರಿಲ್‌ 22ರ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸುವ ನಿರ್ಧಾರ ತೆಗೆದುಕೊಂಡಿತ್ತು. ಸಿಂಧೂ ನದಿ ಜಲಾನಯನ ಪ್ರದೇಶದ ಆರು ಪ್ರಮುಖ ನದಿಗಳ ನೀರನ್ನು ಹಂಚಿಕೊಳ್ಳಲು ಮತ್ತು ತಮ್ಮ ನಡುವಿನ ನೀರಿನ ವಿವಾದವನ್ನು ಬಗೆಹರಿಸಲು ಎರಡೂ ದೇಶಗಳು 1960ರಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.