
ಪಾಕ್–ಅಫ್ಗನ್ ಗಡಿಯ ಶೋರಾಬಕ್ ಜಿಲ್ಲೆಯ ಮಝಲ್ ಎಂಬಲ್ಲಿ ತಾಲಿಬಾನ್ ಭದ್ರತಾ ಪಡೆಗಳು ಗಸ್ತು ನಡೆಸಿದವು –
ಇಸ್ಲಾಮಾಬಾದ್: ಪಾಕ್–ಅಫ್ಗಾನ್ ಸೇನೆಗಳ ನಡುವೆ ಮತ್ತೆ ಭಾರಿ ಗುಂಡಿನ ಚಕಮಕಿ ನಡೆದಿದ್ದು ಗಡಿ ಭಾಗದಲ್ಲಿ ಉಭಯ ದೇಶಗಳ ನಾಗರಿಕರಿಗೆ ಗಂಭೀರ ಗಾಯಗಳಾಗಿವೆ.
ಕೆಲ ದಿನಗಳ ಹಿಂದೆ ಉಭಯ ದೇಶಗಳು ಶಾಂತಿ ಮಾತುಕತೆ ನಡೆಸಿದ್ದವು. ನಂತರ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಇದೀಗ ಉಭಯ ದೇಶಗಳ ಸೇನೆಗಳು ಶುಕ್ರವಾರ ರಾತ್ರಿಯಿಂದ ಗುಂಡಿನ ಚಕಮಕಿ ನಡೆಸಿವೆ.
ಛಮನ್ ಗಡಿಭಾಗದಲ್ಲಿ ಭಾರಿ ಗುಂಡಿನ ಚಕಮಕಿ ನಡೆದಿದ್ದು ‘ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆ ತಿಳಿಸಿದ್ದು, ಯಾರು ಮೃತಪಟ್ಟಿಲ್ಲ’ ಎಂದು ಡಾನ್ ದಿನಪತ್ರಿಕೆ ಶನಿವಾರ ವರದಿ ಮಾಡಿದೆ.
‘ಶುಕ್ರವಾರ ರಾತ್ರಿ 10 ಗಂಟೆಗೆ ಆರಂಭಗೊಂಡಿದ್ದ ದಾಳಿ–ಪ್ರತಿದಾಳಿ ತಡರಾತ್ರಿಯವರೆಗೂ ಮುಂದುವರಿದಿತ್ತು’ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಬದಾನಿ ಪ್ರದೇಶದಲ್ಲಿ ಅಪ್ಗಾನ್ ಸೇನೆಯೆ ಮೋರ್ಟರ್ ಶೆಲ್‌ಗಳ ಮೂಲಕ ದಾಳಿ ಆರಂಭಿಸಿತ್ತು’ ಎಂದು ಪಾಕಿಸ್ತಾನಿ ಅಧಿಕಾರಿಗಳು ಆರೋಪಿಸಿದ್ದಾರೆ. ‘ಪಾಕಿಸ್ತಾನವೆ ಸ್ಪಿನ್ ಬೋಲ್ಡಾಕ್ ಗಡಿಭಾಗದಿಂದ ಮೊದಲು ದಾಳಿ ನಡೆಸಿದೆ’ ಎಂದು ಅಫ್ಗಾನ್ ತಾಲಿಬಾನ್ ವಕ್ತಾರರು ಪ್ರತ್ಯಾರೋಪ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.