ಎ.ಐ ಚಿತ್ರ
ಪೇಶಾವರ: ಗಡಿಯಲ್ಲಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಪಡೆಗಳ ನಡುವೆ ಮಂಗಳವಾರ ರಾತ್ರಿ ಮತ್ತೆ ಸಂಘರ್ಷ ಉಂಟಾಗಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಗಡಿಯಲ್ಲಿ ಗುಂಡಿನ ದಾಳಿ ನಡೆದಿದೆ.
ಪಾಕಿಸ್ತಾನದ ಸರ್ಕಾರಿ ಮಾಧ್ಯಮ ಪಿಟಿವಿ ಪ್ರಕಾರ, ಖುರ್‍ರಂ ಸೆಕ್ಟರ್‌ನಲ್ಲಿ ಅಫ್ಗನ್ ತಾಲಿಬಾನ್ ಮತ್ತು ಫಿತನಾ ಅಲ್-ಖವಾರಿಜ್ ಅಪ್ರಚೋದಿತ ದಾಳಿ ನಡೆಸಿದೆ ಎಂದು ವರದಿ ಮಾಡಿದೆ.
ಪಾಕಿಸ್ತಾನದ ಅಧಿಕಾರಿಗಳು ಫಿತನಾ ಅಲ್-ಖವಾರಿಜ್ ಎಂಬ ಪದವನ್ನು ತೆಹ್ರೀಕ್–ಎ–ತಾಲಿಬಾನ್ ಪಾಕಿಸ್ತಾನ(ಟಿಟಿಪಿ) ಉಗ್ರಗಾಮಿಗಳನ್ನು ಉಲ್ಲೇಖಿಸಲು ಬಳಕೆ ಮಾಡುತ್ತಾರೆ.
ಕಾರ್ಯಾಚರಣೆಯಲ್ಲಿ ಫಿತನಾ ಅಲ್-ಖವಾರಿಜ್‌ನ ಪ್ರಮುಖ ಕಮಾಂಡರ್‌ನ ಹತ್ಯೆ ಮಾಡಲಾಗಿದೆ ಎಂದೂ ಹೇಳಿದೆ.
ವಾರಂತ್ಯದಲ್ಲಿ ಪಾಕಿಸ್ತಾನದ ಭದ್ರತಾ ಠಾಣೆಗಳ ಮೇಲೆ ಅಫ್ಗನ್ ತಾಲಿಬಾನ್ ನಡೆಸಿದ ಅಪ್ರಚೋದಿತ ದಾಳಿಯಲ್ಲಿ 23 ಯೋಧರು ಮೃತಪಟ್ಟಿದ್ದರು ಎಂದು ಪಾಕ್‌ನ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಹೇಳಿತ್ತು.
ಪ್ರತಿದಾಳಿಯಲ್ಲಿ 200ಕ್ಕೂ ಹೆಚ್ಚು ತಾಲಿಬಾನ್ ಹಾಗೂ ಬೆಂಬಲಿತ ಉಗ್ರರು ಹತರಾಗಿದ್ದರು ಎಂದು ಐಎಸ್‌ಪಿಆರ್ ಹೇಳಿತ್ತು.
ಕಳೆದ ವಾರ ಕಾಬೂಲ್ ಮೇಲೆ ಪಾಕಿಸ್ತಾನ ವಾಯು ದಾಳಿ ನಡೆಸಿತ್ತು ಎಂದು ಅಫ್ಗನ್ ಆರೋಪಿಸಿತ್ತು. ಆದರೆ ದಾಳಿ ನಡೆಸಿದ್ದನ್ನು ದೃಢಪಡಿಸಲು ಅಥವಾ ಅಲ್ಲಗಳೆಯಲು ಪಾಕ್ ಸೇನೆ ನಿರಾಕರಿಸಿತ್ತು.