ADVERTISEMENT

ಭಾರತದೊಂದಿಗಿನ ಸಂಘರ್ಷ: ಪಾಕ್‌ ಬಜೆಟ್‌ನಲ್ಲಿ ರಕ್ಷಣಾ ವೆಚ್ಚ ಶೇ 20ರಷ್ಟು ಹೆಚ್ಚಳ

ಪಿಟಿಐ
Published 10 ಜೂನ್ 2025, 16:07 IST
Last Updated 10 ಜೂನ್ 2025, 16:07 IST
<div class="paragraphs"><p>ಪಾಕಿಸ್ತಾನದ ವಿತ್ತ ಸಚಿವ ಮೊಹಮ್ಮದ್ ಔರಂಗಜೇಬ್‌ ಆರ್ಥಿಕ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದರು</p></div>

ಪಾಕಿಸ್ತಾನದ ವಿತ್ತ ಸಚಿವ ಮೊಹಮ್ಮದ್ ಔರಂಗಜೇಬ್‌ ಆರ್ಥಿಕ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದರು

   

ರಾಯಿಟರ್ಸ್ ಚಿತ್ರ

ಇಸ್ಲಾಮಾಬಾದ್: ಭಯೋತ್ಪಾದನೆ ವಿರುದ್ಧ ಭಾರತ ಸಾರಿದ ‘ಆಪರೇಷನ್ ಸಿಂಧೂರ’ ಹಾಗೂ ನಂತರದ ಸೇನಾ ಸಂಘರ್ಷದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವು ತನ್ನ ರಕ್ಷಣಾ ವೆಚ್ಚವನ್ನು 2025–26ನೇ ಸಾಲಿಗೆ ಶೇ 20ರಷ್ಟು ಹೆಚ್ಚಳ ಮಾಡಿದೆ.

ADVERTISEMENT

ಬಜೆಟ್‌ ಮಂಡಿಸಿದ ವಿತ್ತ ಸಚಿವ ಮೊಹಮ್ಮದ್ ಔರಂಗಜೇಬ್‌, ‘ಪ್ರಸಕ್ತ ಆರ್ಥಿಕ ವರ್ಷಕ್ಕೆ 17,573 ಶತಕೋಟಿ ಪಾಕಿಸ್ತಾನ ರೂಪಾಯಿ ಮೊತ್ತದ ಬಜೆಟ್‌ ಮಂಡಿಸಲಾಗಿದ್ದು, ಇದರಲ್ಲಿ ರಕ್ಷಣಾ ಇಲಾಖೆಗೆ ₹77 ಸಾವಿರ ಕೋಟಿ (2,550 ಶತಕೋಟಿ ಪಾಕಿಸ್ತಾನ ರೂಪಾಯಿ) ಮೀಸಲಿಡಲಾಗಿದೆ’ ಎಂದಿದ್ದಾರೆ.

‘ಕಳೆದ ಸಾಲಿನಲ್ಲಿ ರಕ್ಷಣಾ ಇಲಾಖೆಗೆ 2,122 ಶತಕೋಟಿ ಪಾಕಿಸ್ತಾನ ರೂಪಾಯಿಯನ್ನು ಮೀಸಲಿಡಲಾಗಿತ್ತು. 2023–24ರಲ್ಲಿ 1,804 ಶತಕೋಟಿಯಷ್ಟು ಹಂಚಿಕೆ ಮಾಡಲಾಗಿತ್ತು. ಈ ವರ್ಷ ಇದನ್ನು ಹೆಚ್ಚಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಮುಗ್ದರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದೊಳಗಿದ್ದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯನ್ನು ಮೇ 7ರಂದು ಆರಂಭಿಸಿತು. ಇದರ ಬೆನ್ನಲ್ಲೇ ಪಾಕಿಸ್ತಾನದ ಹಲವು ವಾಯು ನೆಲೆಗಳನ್ನು ಭಾರತೀಯ ಸೇನೆ ನಾಶಪಡಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆಯು ದಾಳಿಯ ಯತ್ನ ನಡೆಸಿತ್ತು. ಆದರೆ ಭಾರತದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅವೆಲ್ಲವುಗಳನ್ನು ಸಮರ್ಥವಾಗಿ ನಿಷ್ಕ್ರಿಯಗೊಳಿಸಿದವು. ಇದರ ಬೆನ್ನಲ್ಲೇ ಮೇ 10ರಂದು ಉಭಯ ರಾಷ್ಟ್ರಗಳು ಕದನ ವಿರಾಮ ಘೋಷಿಸಿದವು.

ಮಂಗಳವಾರ ಮಂಡಿಸಲಾದ ಪಾಕಿಸ್ತಾನ ಬಜೆಟ್‌ನಲ್ಲಿ ಸೇನೆಗೆ 2ನೇ ಸ್ಥಾನ ಮೀಸಲಿಡಲಾಗಿದೆ. ಜತೆಗೆ ದೇಶದ ಆರ್ಥಿಕ ಪ್ರಗತಿಯು ಶೇ 4.2ರಷ್ಟು ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಪಾಕಿಸ್ತಾನದ ಜಿಡಿಪಿ ಶೇ 2.7ರಷ್ಟಿತ್ತು.

ಬಡ್ಡಿಯನ್ನೂ ಒಳಗೊಂಡು ಪಾಕಿಸ್ತಾನದ ಒಟ್ಟು ಸಾಲದ ಮೊತ್ತ 8,207 ಶತಕೋಟಿಯಷ್ಟಿದೆ. ಆಡಳಿತಕ್ಕೆ 971 ಶತಕೋಟಿ, ಸಬ್ಸಿಡಿಗಳಿಗೆ 1,186 ಶತಕೋಟಿ, ಪಿಂಚಣಿಗೆ 1,055 ಶತಕೋಟಿ, ಸಾರ್ವಜನಿಕ ಅಭಿವೃದ್ಧಿಗೆ 1 ಸಾವಿರ ಕೋಟಿ ಪಾಕಿಸ್ತಾನ ರೂಪಾಯಿ ಮೀಸಲಿಡಲಾಗಿದೆ. ಹಣದುಬ್ಬರ ಪ್ರಮಾಣವು ಶೇ 7.5ರಷ್ಟು ಹಾಗೂ ಆರ್ಥಿಕ ಕೊರತೆ ಶೇ 3.9ರಷ್ಟು ಎಂದು ಅಂದಾಜಿಸಲಾಗಿದೆ.

‘ಕಳೆದ ಎರಡು ವರ್ಷಗಳಿಂದ ಹಣದುಬ್ಬರ ಪ್ರಮಾಣವನ್ನು ಶೇ 4.7ರಷ್ಟು ತಗ್ಗಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಔರಂಗಜೇಬ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.