ADVERTISEMENT

ಇಮ್ರಾನ್‌ ಸ್ವೀಕರಿಸಿದ್ದ ಉಡುಗೊರೆಗಳ ಮಾಹಿತಿ ಬಹಿರಂಗಕ್ಕೆ ಪಾಕ್‌ ಕೋರ್ಟ್‌ ಆದೇಶ

ಪಿಟಿಐ
Published 20 ಏಪ್ರಿಲ್ 2022, 12:28 IST
Last Updated 20 ಏಪ್ರಿಲ್ 2022, 12:28 IST
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌   

ಇಸ್ಲಮಾಬಾದ್: ಇಮ್ರಾನ್‌ ಖಾನ್‌ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಕ್ಕೇರಿದ ದಿನದಿಂದ ಪದಚ್ಯುತಗೊಳ್ಳುವ ವರೆಗೆ ಸ್ವೀಕರಿಸಿರುವ ಉಡುಗೊರೆಗಳ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಅಲ್ಲಿನ ಕೋರ್ಟ್‌ ಬುಧವಾರ ಅದೇಶಿಸಿದೆ.

ಆಗಸ್ಟ್‌ 2018 ರಲ್ಲಿ ಪ್ರಧಾನಿ ಹುದ್ದೆಗೇರಿದ ಇಮ್ರಾನ್‌ ಖಾನ್‌ ಅವರು ವಿದೇಶಿ ಗಣ್ಯರಿಂದ ಸ್ವೀಕರಿಸಿರುವ ಉಡುಗೊರೆಗಳ ಮಾಹಿತಿ ಬಹಿರಂಗ ಪಡಿಸುವಂತೆ ಕೋರಿ ಇಸ್ಲಾಮಾಬಾದ್‌ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಮಿಯಾನ್‌ ಗುಲ್‌ ಹಸನ್‌ ಔರಂಗಜೇಬ್‌ ಈ ಆದೇಶ ಹೊರಡಿಸಿದ್ದಾರೆ.

ಉಡುಗೊರೆ ಕುರಿತ ಮಾಹಿತಿಯನ್ನು 10 ದಿನಗಳ ಒಳಗೆ ಸಾರ್ವಜನಿಕಗೊಳಿಸುವಂತೆ ಹಾಗೂ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಶಹಬಾಝ್ ಷರೀಫ್ ನೇತೃತ್ವದ ಸರ್ಕಾರಕ್ಕೆ ನ್ಯಾ. ಔರಂಗಜೇಬ್‌ ಸೂಚನೆ ನೀಡಿದ್ದಾರೆ.

ADVERTISEMENT

'ಬೇರೆ ದೇಶದ ಸರ್ಕಾರಿ ಅಧಿಕಾರಿಗಳು ನೀಡಿದ ಉಡುಗೊರೆಗಳು ರಾಷ್ಟ್ರಕ್ಕೆ ಸೇರಿದವುಗಳಾಗಿವೆ. ಯಾರದ್ದೋ ಒಬ್ಬರಿಗೆ ಸೇರಿದ್ದಲ್ಲ. ಈ ಉಡುಗೊರೆಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಯಾರಾದರೂ ಕೊಂಡೊಯ್ದಿದ್ದರೆ ಅವುಗಳನ್ನು ಹಿಂದಕ್ಕೆ ಪಡೆಯಬೇಕು' ಎಂದು ನ್ಯಾ. ಔರಂಗಜೇಬ್‌ ತಿಳಿಸಿದ್ದಾರೆ.

ಆರಂಭದಲ್ಲಿ ಇಮ್ರಾನ್‌ ಖಾನ್‌, ‘ವಿದೇಶಗಳಿಂದ ನನಗೆ ಬಂದಿದ್ದ ಉಡುಗೊರೆಗಳನ್ನು ಇಟ್ಟುಕೊಳ್ಳಬೇಕೇ ಅಥವಾ ಬೇಡವೇ ಎಂಬುದು ನನ್ನ ಆಯ್ಕೆ’ ಎಂದಿದ್ದರು.

ಸರ್ಕಾರದ ಭಂಡಾರದಲ್ಲಿರುವ ಉಡುಗೊರೆಗಳನ್ನು ಮಾರಾಟ ಮಾಡಿರುವುದಾಗಿ ಪ್ರತಿಪಕ್ಷ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಪಕ್ಷ ಮಾಡಿರುವ ಆರೋಪ ಆಧಾರರಹಿತ. ಸರ್ಕಾರದ ಖಜಾನೆಯಿಂದ ಏನೆಲ್ಲಾ ಪಡೆದಿದ್ದೇನೆ ಎಂಬುದಕ್ಕೆ ದಾಖಲೆಗಳಿವೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಸಾಕ್ಷಿ ಇರುವವರು ಮುಂದೆ ಬರಬೇಕು ಎಂದು ಸವಾಲು ಹಾಕಿದ್ದರು.

ಸರ್ಕಾರದ ಭಂಡಾರದಲ್ಲಿದ್ದ ಉಡುಗೊರೆಗಳನ್ನು ಆ ಉಡುಗೊರೆಯ ಶೇ 50ರಷ್ಟು ಹಣ ಪಾವತಿಸಿ, ಖರೀದಿಸಿರುವುದಾಗಿಯೂ ಅವರು ಹೇಳಿದ್ದರು.

'ವ್ಯಕ್ತಿಗಳು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಪಾಕಿಸ್ತಾನ ಪ್ರಧಾನಿ ಕಚೇರಿ ಶಾಶ್ವತ' ಎಂದು ನ್ಯಾ. ಔರಂಗಜೇಬ್‌ ಛೀಮಾರಿ ಹಾಕಿರುವುದಾಗಿ 'ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ರಿಪೋರ್ಟ್‌' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.