ADVERTISEMENT

ಪಾಕಿಸ್ತಾನ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾಷಣ ನಿರ್ಬಂಧಿಸಿದ ಮಾಧ್ಯಮ ಮಂಡಳಿ

ಪಿಟಿಐ
Published 6 ಮಾರ್ಚ್ 2023, 12:53 IST
Last Updated 6 ಮಾರ್ಚ್ 2023, 12:53 IST
ಇಮ್ರಾನ್‌ ಖಾನ್
ಇಮ್ರಾನ್‌ ಖಾನ್   

ಇಸ್ಲಮಾಬಾದ್: ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಮಂಡಳಿಯು(ಪಿಇಎಂಆರ್‌ಎ) ಟಿವಿ ಮಾಧ್ಯಮಗಳಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣ ಪ್ರಸಾರ ಮಾಡುವುದನ್ನು ನಿರ್ಬಂಧಿಸುವ ನಿರ್ಧಾರ ಮಾಡಿದೆ.

'ತೋಶಖಾನ‘ ಪ್ರಕರಣದಲ್ಲಿ ಇಮ್ರಾನ್ ಖಾನ್ ಬಂಧನದಿಂದ ತಪ್ಪಿಸಿಕೊಳ್ಳುತ್ತಿರುವುದು ಹಾಗೂ ಸರ್ಕಾರಿ ಸಂಸ್ಥೆಗಳ ವಿರುದ್ಧ ಪ್ರಚೋಧನಕಾರಿ ಭಾಷಣ ಮಾಡಿದ ಹಿನ್ನೆಲೆ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದೆ.

‘ಸರ್ಕಾರಿ ಸಂಸ್ಥೆಗಳ ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ನಡೆಸುವವರನ್ನು ನಿರ್ಬಂಧಿಸಲಾಗುತ್ತದೆ‘ ಎಂಬ ನಿಯಮಕ್ಕೆ ಅನುಸಾರವಾಗಿ ತೀರ್ಮಾನಿಸಿದ್ದೇವೆ ಎಂದು ಮಾಧ್ಯಮ ನಿಯಂತ್ರಣ ಮಂಡಳಿ ಹೇಳಿದೆ.

ADVERTISEMENT

ಅಲ್ಲದೇ, ಯಾವುದಾದರೂ ಚಾನೆಲ್‌ಗಳು ಇಮ್ರಾನ್ ಭಾಷಣ ಪ್ರಸಾರ ಮಾಡಿದರೆ ಮಾಧ್ಯಮ ಪರವಾನಗಿ ರದ್ದುಗೊಳಿಸಲಾಗುವುದು ಎಂದಿದೆ.

ಲಾಹೋರ್‌ನಲ್ಲಿ ತಮ್ಮ ಪಕ್ಷ ತೆಹ್ರೀಕ್–ಇ–ಇನ್ಸಾಫ್‌ನ ಕಾರ್ಯಕರ್ತರನ್ನುದ್ದೇಶಿಸಿ ಭಾಷಣದಲ್ಲಿ ಇಮ್ರಾನ್,‘ ನಾನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ತಲೆಬಾಗಿಲ್ಲ‘ ಎಂದಿದ್ದರು. ಜತೆಗೆ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

‘ಸರ್ಕಾರದ ನಾಯಕರು ವಿದೇಶದಲ್ಲಿ ಸಂಪತ್ತು ಕೂಡಿಡುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವ ಅವರು ಅಪರಾಧಿಗಳಿಗೆ ಕಾನೂನಿನಡಿ ರಕ್ಷಣೆ ಕೊಟ್ಟಿರುತ್ತಾರೆ‘ ಎಂದು ಅವರು ಕಿಡಿಕಾರಿದ್ದರು.

ತದನಂತರ ಭಾನುವಾರ ತೋಶಖಾನ ಪ‍್ರಕರಣದಡಿ ಇಮ್ರಾನ್ ಅವರನ್ನು ಬಂಧಿಸಲು ಲಾಹೋರ್‌ಗೆ ಪೊಲೀಸರು ಧಾವಿಸಿದರು. ಆದರೆ ಇಮ್ರಾನ್ ಅವರ ಕಾನೂನು ತಂಡ, ಅವರು ಮಂಗಳವಾರ (ಮಾ.7) ರಂದು ಹಾಜರಾಗುವುದಾಗಿ ಭರವಸೆ ನೀಡಿದ ಮೇಲೆ ಪೊಲೀಸರು ಹಿಂದಿರುಗಿದ್ದರು.

ಪಿಇಎಂಆರ್‌ಎ ನಿರ್ಧಾರ ಇದೇ ಮೊದಲ ಬಾರಿಯಲ್ಲ, ಈ ಹಿಂದೆಯೂ ಇಮ್ರಾನ್ ಭಾಷಣಗಳಿಗೆ ನಿಷೇಧ ಹೇರಿತ್ತು.

ತೋಶಖಾನ ಎಂದರೆ?:

ತೋಶಖಾನ ಎಂಬುದು ಸರ್ಕಾರದ ಉಡುಗೊರೆಯ ಸಂಗ್ರಹಾಲಯ . ಇಲ್ಲಿ ವಿದೇಶಿ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಸರ್ಕಾರಕ್ಕೆ ಕೊಟ್ಟ ಉಡುಗೊರೆಗಳನ್ನು ಸಂಗ್ರಹಿಸಿಡಲಾಗುತ್ತದೆ.

ಏನಿದು ಪ್ರಕರಣ?:

ಇಮ್ರಾನ್ ಖಾನ್, ತೋಶಖಾನದಿಂದ ಅಮೂಲ್ಯ ಉಡುಗೊರೆಗಳನ್ನು ಅಕ್ರಮವಾಗಿ ತೆಗೆದುಕೊಂಡು ತಮ್ಮ ಬಳಿ ಇರಿಸಿದ್ದಾರೆ ಎಂಬುದೇ ತೋಶಖಾನ ಪ್ರಕರಣ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಪ್ರಸಾರ ನಿರ್ಬಂಧಿಸಿದ ಮಾಧ್ಯಮ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.