ADVERTISEMENT

ಹೈಕಮಿಷನರ್‌ ವಾಪಸ್‌, ರಾಜತಾಂತ್ರಿಕ ಸಂಬಂಧ ಅಂತ್ಯ: ಪಾಕಿಸ್ತಾನ

370ನೇ ವಿಧಿ ರದ್ದತಿಗೆ ಪಾಕ್‌ ಕ್ರತಿಕ್ರಿಯೆ

ಪಿಟಿಐ
Published 7 ಆಗಸ್ಟ್ 2019, 20:15 IST
Last Updated 7 ಆಗಸ್ಟ್ 2019, 20:15 IST
ಪಾಕಿಸ್ತಾನದ ಜಮಾತ್ ಇಸ್ಲಾಮಿ ಪಕ್ಷದ ವಿದ್ಯಾರ್ಥಿ ಸಂಘಟನೆ ಸದಸ್ಯರು ಭಾನುವಾರ ಪೆಶಾವರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಸುಡಲು ಮುಂದಾದರು–ಎಎಫ್‌ಪಿ ಚಿತ್ರ
ಪಾಕಿಸ್ತಾನದ ಜಮಾತ್ ಇಸ್ಲಾಮಿ ಪಕ್ಷದ ವಿದ್ಯಾರ್ಥಿ ಸಂಘಟನೆ ಸದಸ್ಯರು ಭಾನುವಾರ ಪೆಶಾವರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಸುಡಲು ಮುಂದಾದರು–ಎಎಫ್‌ಪಿ ಚಿತ್ರ   

ಇಸ್ಲಾಮಾಬಾದ್‌: ಭಾರತದ ಜೊತೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಹಾಕಲು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ರದ್ದುಪಡಿಸಲು ಪಾಕಿಸ್ತಾನ ಬುಧವಾರ ತೀರ್ಮಾನಿಸಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರವು ರದ್ದು ಮಾಡಿರುವುದಕ್ಕೆ ಪ್ರತಿಯಾಗಿ ಪಾಕ್‌ ಈ ಕ್ರಮ ಕೈಗೊಂಡಿದೆ. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಬುಧವಾರ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಸದಸ್ಯರ ಜೊತೆ ಸಭೆ ನಡೆಸಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಈ ತೀರ್ಮಾನ ಹೊರಬಿದ್ದಿದೆ.

ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್‌ ಅಜಯ್‌ ಬಿಸರಿಯಾ ಅವರನ್ನು ವಾಪಸ್‌ ಕಳುಹಿಸಿ, ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಯನ್ನು ವಾಪಸ್‌ ಕರೆಯಿಸಿಕೊಳ್ಳುವುದಾಗಿಯೂ ಪಾಕಿಸ್ತಾನ ಹೇಳಿದೆ.

ADVERTISEMENT

‘ಇನ್ನು ಮುಂದೆ ನವದೆಹಲಿಯಲ್ಲಿ ನಮ್ಮ ರಾಯಭಾರಿ ಇರುವುದಿಲ್ಲ, ಇಲ್ಲಿರುವ ಭಾರತದ ರಾಯಭಾರಿಯನ್ನು ವಾಪಸ್‌ ಕಳುಹಿಸಲಾಗುವುದು’ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾಹ್‌ ಮಹಮೂದ್‌ ಖುರೇಷಿ ಅವರು ಎನ್‌ಎಸ್‌ಸಿ ಸಭೆಯ ಬಳಿಕ ಹೇಳಿದ್ದಾರೆ. ಭಾರತದ ಹೈಕಮಿಷನರ್‌ ಬಿಸರಿಯಾ ಅವರು ಈಗಾಗಲೇ ಪಾಕಿಸ್ತಾನದಲ್ಲಿದ್ದಾರೆ. ಆದರೆ ಭಾರತಕ್ಕೆ ಪಾಕಿಸ್ತಾನದ ರಾಯಭಾರಿಯಾಗಿರುವ ಮೊಯಿನ್‌ ಉಲ್‌ ಹಕ್‌ ಅವರು ಇನ್ನೂ ದೆಹಲಿಯಲ್ಲಿ ಅಧಿಕಾರ ಸ್ವೀಕರಿಸಿಲ್ಲ.

‘ಭಾರತವು ಏಕಪಕ್ಷೀಯವಾಗಿ ಮತ್ತು ಕಾನೂನು ಬಾಹಿರವಾಗಿ ಕೈಗೊಂಡ ತೀರ್ಮಾನದ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಆ ದೇಶದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಕಾಶ್ಮೀರದ ಬೆಳವಣಿಗೆಯನ್ನು ವಿಶ್ವಸಂಸ್ಥೆ ಮತ್ತು ಅದರ ಭದ್ರತಾ ಮಂಡಳಿಯ ಗಮನಕ್ಕೆ ತರಲು ಸಮಿತಿ ತೀರ್ಮಾನಿಸಿದೆ. ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು (ಆ.14) ಕಾಶ್ಮೀರದ ಜನರಲ್ಲಿ ಸ್ಥೈರ್ಯ ತುಂಬುವ ರೀತಿಯಲ್ಲಿ ಆಚರಿಸಲಾಗುವುದು ಮತ್ತು ಭಾರತದ ಸ್ವಾತಂತ್ರ್ಯದಿನವಾದ ಆಗಸ್ಟ್‌ 15ನ್ನು ಕರಾಳದಿನವನ್ನಾಗಿ ಆಚರಿಸಲಾಗುವುದು’ ಎಂದು ಸಭೆಯ ಬಳಿಕ ಪಾಕಿಸ್ತಾನ ಬಿಡುಗಡೆ ಮಾಡಿದ ಪ್ರಕಟಣೆ ಹೇಳಿದೆ.

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಜಗತ್ತಿನ ಗಮನಕ್ಕೆ ತರಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮತ್ತು ಗಡಿಭಾಗದಲ್ಲಿ ಕಟ್ಟೆಚ್ಚರದಿಂದ ಇರುವಂತೆ ಸೇನೆಗೆ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಭೆಗೂ ಮೊದಲು ನಡೆದ ಪಾಕಿಸ್ತಾನ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ‘ಭಾರತದ ರಾಯಭಾರಿಯನ್ನು ಕೂಡಲೇ ವಾಪಸ್‌ ಕಳುಹಿಸಬೇಕು’ ಎಂದು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್‌ ಚೌಧರಿ ಪಾಕ್‌ ಸರ್ಕಾರವನ್ನು ಒತ್ತಾಯಿಸಿದ್ದರು. ‘ಆತ್ಮಗೌರವಕ್ಕಾಗಿ ನಾವು ಯುದ್ಧಕ್ಕೂ ಹೆದರಬಾರದು. ಒಂದುವೇಳೆ ಯುದ್ಧ ನಡೆದರೆ ಎಲ್ಲಾ ರಾಷ್ಟ್ರಗಳಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ’ ಎಂದೂ ಅವರು ಹೇಳಿದ್ದರು.

ಭಾರತ ಪರ ಬ್ಯಾನರ್‌

370ನೇ ವಿಧಿಯನ್ನು ರದ್ದು ಮಾಡಿದ ಭಾರತದ ಕ್ರಮವನ್ನು ಶ್ಲಾಘಿಸುವ ಬ್ಯಾನರ್‌ಗಳು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಕಂಡುಬಂದವು.

ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶಗಳನ್ನು ಒಳಗೊಂಡಂಥ ‘ಅಖಂಡ ಭಾರತ’ದ ಚಿತ್ರವನ್ನು ಒಳಗೊಂಡಿದ್ದ ಬ್ಯಾನರ್‌ನಲ್ಲಿ, ಶಿವಸೇನೆಯ ನಾಯಕ ಸಂಜಯ್‌ ರಾವತ್‌ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣದ ಅಂಶಗಳನ್ನು ಮುದ್ರಿಸಲಾಗಿತ್ತು.

ತುಂಬಾ ಹೊತ್ತಿನವರೆಗೂ ಈ ಬ್ಯಾನರ್‌ಗಳು ಯಾರ ಗಮನಕ್ಕೂ ಬಂದಿರಲಿಲ್ಲ. ಸಂಜೆಯ ವೇಳೆಗೆ ಇದನ್ನು ಓದಿದ ಕೆಲವು ಪಾದಚಾರಿಗಳು ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಆ ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಅವುಗಳನ್ನು ತೆರವುಗೊಳಿಸಿದರು. ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.