ADVERTISEMENT

ಪಾಕಿಸ್ತಾನ ಮೇಲೆ ಇರಾನ್ ದಾಳಿ: ರಾಯಭಾರಿ ವಜಾ; ಪಾಕ್‌ ರಾಯಭಾರಿ ಹಿಂದಕ್ಕೆ

ಏಜೆನ್ಸೀಸ್
Published 17 ಜನವರಿ 2024, 14:14 IST
Last Updated 17 ಜನವರಿ 2024, 14:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಸ್ಲಾಮಾಬಾದ್: ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್‌ ವಿರುದ್ಧದ ಪ್ರತೀಕಾರದ ಕ್ರಮವಾಗಿ, ಟೆಹ್ರಾನ್‌ನಲ್ಲಿರುವ ತನ್ನ ರಾಯಭಾರಿಯನ್ನು ಪಾಕಿಸ್ತಾನ ಹಿಂದಕ್ಕೆ ಕರೆಯಿಸಿಕೊಂಡಿದೆ. ಜತೆಗೆ ಪಾಕಿಸ್ತಾನದಲ್ಲಿರುವ ಇರಾನ್ ರಾಯಭಾರಿಯನ್ನು ವಜಾಗೊಳಿಸಿದೆ.

ಈ ಕುರಿತು ಜಿಯೊ ನ್ಯೂಸ್ ವರದಿ ಮಾಡಿದ್ದು, ‘ಪಾಕಿಸ್ತಾನದ ಇರಾನ್ ರಾಯಭಾರಿ ಸದ್ಯ ಸ್ವದೇಶಕ್ಕೆ ಮರಳಿದ್ದು, ಅವರು ವಾಪಾಸ್ ಬರುವುದಿಲ್ಲ. ಹಾಗೆಯೇ ಇರಾನ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಮುಮ್ತಾಜ್‌ ಝಹಾರಾ ಬಲೂಚ್‌ ಹೇಳಿದ್ದಾರೆ.

ADVERTISEMENT

ಟೆಹ್ರಾನ್‌ ವಿರೋಧಿಸುವ ಭಯೋತ್ಪಾದಕ ಸಂಘಟನೆಯ ನೆಲೆಗಳ ಮೇಲೆ ಇರಾನ್ ಮಂಗಳವಾರ ದಾಳಿ ನಡೆಸಿತ್ತು. ಇದಕ್ಕೆ ಡ್ರೋನ್ ಮತ್ತು ಕ್ಷಿಪಣಿಗಳನ್ನು ಬಳಸಿತ್ತು.

‘ಪಾಕಿಸ್ತಾನದ ಸಾರ್ವಭೌಮತ್ವದ ಉಲ್ಲಂಘನೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರ ಗಂಭೀರ ಸ್ವರೂಪವನ್ನು ಇರಾನ್ ಎದುರಿಸಬೇಕಾಗುತ್ತದೆ. ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟಿನ ಇತ್ಯರ್ಥಕ್ಕೆ ಮಾತುಕತೆ ಒಳಗೊಂಡಂತೆ ಹಲವು ದಾರಿಗಳಿವೆ. ಆದರೆ ಅದನ್ನು ಬಿಟ್ಟು ದಾಳಿಯ ಮಾರ್ಗ ಆಯ್ದುಕೊಂಡಿದ್ದು ಸರಿಯಲ್ಲ’ ಎಂದು ವಿದೇಶಾಂಗ ಸಚಿವ ಹೇಳಿದ್ದಾರೆ.

ಪಾಕಿಸ್ತಾನದ ಜೈಷ್ ಅಲ್ ಅದಲ್‌ ಸಂಘಟನೆಯನ್ನು ‘ಭಯೋತ್ಪಾದಕ’ ಎಂದು ಇರಾನ್ 2012ರಲ್ಲಿ ಘೋಷಿಸಿತ್ತು. ಸುನ್ನಿ ಸಮುದಾಯಕ್ಕೆ ಸೇರಿದ ಸಂಘಟನೆ ಇದಾಗಿದ್ದು, ಇರಾನ್‌ನ ಆಗ್ನೇಯ ಭಾಗದಲ್ಲಿರುವ ಸಿಸ್ತಾನ್–ಬಲೂಚಿಸ್ತಾನ್‌ ಪ್ರದೇಶದಲ್ಲಿ ಇದು ಸಕ್ರಿಯವಾಗಿದೆ ಎಂದು ಅಲ್ ಅರೇಬಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ಕೆಲ ವರ್ಷಗಳಿಂದ ಇರಾನ್‌ನ ಸೇನಾ ನೆಲೆ ಏಲೆ ಜೈಷ್ ಅಲ್ ಅದಲ್ ಸಂಘಟನೆಯು ಹಲವು ಬಾರಿ ದಾಳಿ ನಡೆಸಿದೆ. ಕಳೆದ ಡಿಸೆಂಬರ್‌ನಲ್ಲಿ ಸಿಸ್ತಾನ್–ಬಲುಚಿಸ್ತಾನ್‌ ಪ್ರದೇಶದ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಸಂಘಟನೆಯು, 11 ಪೊಲೀಸರ ಹತ್ಯೆಗೆ ಕಾರಣವಾಗಿತ್ತು. ಪಾಕಿಸ್ತಾನ, ಆಫ್ಗಾನಿಸ್ತಾನ ಮತ್ತು ಇರಾನ್‌ ಗಡಿಯನ್ನು ಹಂಚಿಕೊಂಡಿರುವ ಸಿಸ್ತಾನ್–ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ ಇರಾನ್ ಭದ್ರತಾ ಪಡೆ ಮತ್ತು ಸುನ್ನಿ ಭಯೋತ್ಪಾದಕ ಸಂಘಟನೆ ಹಾಗೂ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆದಾರರ ನಡುವೆ ಆಗಾಗ್ಗೆ ಘರ್ಷಣೆ ನಡೆಯುತ್ತಲೇ ಇರುತ್ತದೆ ಎಂದು ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.