ADVERTISEMENT

ಕೋವಿಡ್‌: ಪಾಕ್‌ನಲ್ಲಿ ರೊಬೋಟ್‌ ಚಾಲಿತ ಮೊದಲ ಪ್ರಯೋಗಾಲಯ ಆರಂಭ

ಪಿಟಿಐ
Published 13 ನವೆಂಬರ್ 2020, 9:55 IST
Last Updated 13 ನವೆಂಬರ್ 2020, 9:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನವು ಕೋವಿಡ್‌ ನಿಯಂತ್ರಣ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಸ್ಲಾಮಾಬಾದ್‌ನಲ್ಲಿ ಬ್ರಿಟನ್‌ ಸಹಯೋಗದೊಂದಿಗೆ ರೊಬೋಟ್‌ ಚಾಲಿತ ಅತ್ಯಾಧುನಿಕ ಮೊಬೈಲ್ ಪ್ರಯೋಗಾಲಯವನ್ನು ಇದೇ ಮೊದಲ ಬಾರಿಗೆ ಪ್ರಾರಂಭಿಸಿದೆ.

ಬ್ರಿಟನ್‌ನ ಒಪೆನ್ಸ್‌ ಸಹಭಾಗಿತ್ವದಲ್ಲಿ ಗುರುವಾರ ಈ ಮೊಬೈಲ್‌ ಪ್ರಯೋಗಾಲಯವನ್ನು ಪ್ರಾರಂಭಿಸಲಾಗಿದ್ದು, ‍ಪ್ರಯೋಗಾಲಯವು ಕೋವಿಡ್‌ ಆರ್‌ಟಿ–ಕ್ಯೂಆರ್‌ಪಿಸಿಆರ್‌ ಪರೀಕ್ಷೆಯನ್ನು ತ್ವರಿತಗತಿಯಲ್ಲಿ ಮಾಡಬಹುದಾದ ಸಾಮರ್ಥ್ಯವನ್ನು ಹೊಂದಿದೆ.

ಈ ಪ್ರಯೋಗಾಲಯದಲ್ಲಿ ಎಲ್ಲಾ ಪಾಳಿಯಲ್ಲೂ ಕೇವಲ ಆರು ಸಿಬ್ಬಂದಿಯ ಅವಶ್ಯಕತೆ ಇದೆ. ಇಲ್ಲಿ ಪ್ರತಿನಿತ್ಯ 2,000 ಪರೀಕ್ಷೆಗಳನ್ನು ನಡೆಸಬಹುದಾಗಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಟಿಷ್ ಹೈಕಮಿಷನರ್ ಡಾ. ಕ್ರಿಶ್ಚಿಯನ್ ಟರ್ನರ್ ಅವರು, ಈ ಯೋಜನೆಯು ಪಾಕಿಸ್ತಾನ ಮತ್ತು ಬ್ರಿಟನ್‌ ನಡುವಿನ ನಿಕಟ ಸಹಕಾರದ ಸಂಕೇತ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್‌ ವಿರುದ್ಧ ಹೋರಾಡುವಲ್ಲಿ ಬ್ರಿಟನ್‌ ಮುಂದಿದೆ ಎಂಬ ಹೆಮ್ಮೆ ನಮ್ಮಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ 24 ಗಂಟೆಗಳಲ್ಲಿ ಮೊದಲ ಬಾರಿಗೆ 2,000 ಹೊಸ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3.52 ಲಕ್ಷ ದಾಟಿದೆ. ಹೊಸದಾಗಿ 37 ಮಂದಿ ಮೃತಪಟ್ಟಿದ್ದು, ಸೋಂಕಿನಿಂದ ಒಟ್ಟು 7,092 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 321,563 ಗುಣಮುಖರಾಗಿದ್ದು, 1,219 ಜನರ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.