ADVERTISEMENT

ಪರ್ಲ್ ಹತ್ಯೆ: ಖುಲಾಸೆಗೊಂಡಿದ್ದ ಆರೋಪಿಗೆ ಗೃಹ ಬಂಧನ

ಏಜೆನ್ಸೀಸ್
Published 2 ಫೆಬ್ರುವರಿ 2021, 10:19 IST
Last Updated 2 ಫೆಬ್ರುವರಿ 2021, 10:19 IST
ಡೇನಿಯಲ್‌ ಪರ್ಲ್‌
ಡೇನಿಯಲ್‌ ಪರ್ಲ್‌   

ಇಸ್ಲಾಮಾಬಾದ್‌: ಅಮೆರಿಕ ಪತ್ರಕರ್ತ ಡೇನಿಯಲ್‌ ಪರ್ಲ್‌ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಪ್ರಮುಖ ಆರೋಪಿ ಅಹ್ಮದ್‌ ಸಯೀದ್‌ ಒಮರ್‌ ಶೇಖ್‌ಗೆ, ಗೃಹಬಂಧನ ವಿಧಿಸಿ ಪಾಕಿಸ್ತಾನದ ಸುಪ್ರೀಂಕೋರ್ಟ್‌ ಮಂಗಳವಾರ ಆದೇಶಿಸಿದೆ.

ಪರ್ಲ್‌ ಹತ್ಯೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಸುಪ್ರಿಂಕೋರ್ಟ್‌ ಇತ್ತೀಚೆಗೆ ಎತ್ತಿ ಹಿಡಿದಿತ್ತು. ಇದಕ್ಕೆ ಅಮೆರಿಕ ಹಾಗೂ ವಿಶ್ವಸಂಸ್ಥೆಯಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ತೀರ್ಪಿನ ಮರುಪರಿಶೀಲನೆ ಕೋರಿ ಪಾಕಿಸ್ತಾನ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಸುಪ್ರೀಂಕೋರ್ಟ್‌ನ ಆದೇಶದಂತೆ, ಸಯೀದ್‌ ಒಮರ್‌ ಶೇಖ್‌ ಮನೆಯಿಂದ ಹೊರಗೆ ಹೋಗುವಂತಿಲ್ಲ. ಆತನನ್ನು ಭೇಟಿ ಮಾಡಲು ಪತ್ನಿ ಹಾಗೂ ಮಕ್ಕಳಿಗೆ ಅವಕಾಶ ನೀಡಲಾಗಿದೆ.

ADVERTISEMENT

‘ಇದು ನನ್ನ ಪುತ್ರನಿಗೆ ಸಿಕ್ಕ ಸಂಪೂರ್ಣ ಸ್ವಾತಂತ್ರ್ಯವಲ್ಲ. ಆದರೆ, ಸ್ವಾತಂತ್ರ್ಯದತ್ತ ಒಂದು ಹೆಜ್ಜೆ ಮಾತ್ರ’ ಎಂದು ವಿಚಾರಣೆ ವೇಳೆ ಹಾಜರಿದ್ದ ಅಹ್ಮದ್‌ ತಂದೆ ಸಯೀದ್‌ ಶೇಖ್‌ ಪ್ರತಿಕ್ರಿಯಿಸಿದ್ದಾರೆ.

‘ಶೇಖ್‌ ಹಾಗೂ ಇತರ ಆರೋಪಿಗಳ ಖುಲಾಸೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗೆ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ. ಈ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿರುವ ನ್ಯಾಯಾಧೀಶರುಗಳೇ ಮೇಲ್ಮನವಿಯ ಮರುಶೀಲನಾ ತಂಡದಲ್ಲಿರುವುದು ಇದಕ್ಕೆ ಕಾರಣ’ ಎಂದು ಪರ್ಲ್‌ ಪರ ವಕೀಲ ಫೈಸಲ್‌ ಶೇಖ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.