ADVERTISEMENT

ಜಾಧವ್ ಮರಣದಂಡನೆ ಪುನರ್ ಪರಿಶೀಲಿಸುವ ಮಸೂದೆಗೆ ಪಾಕ್ ಸಂಸದೀಯ ಸಮಿತಿ ಅನುಮೋದನೆ

ಪಿಟಿಐ
Published 22 ಅಕ್ಟೋಬರ್ 2020, 7:41 IST
Last Updated 22 ಅಕ್ಟೋಬರ್ 2020, 7:41 IST
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್   

ಇಸ್ಲಾಮಾಬಾದ್‌: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ ಅವರಿಗೆ ನೀಡಿರುವ ಮರಣ ದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸುವ ಮಸೂದೆಗೆ ಪಾಕಿಸ್ತಾನದ ಸಂಸದೀಯ ಸಮಿತಿ ಅನುಮೋದನೆ ನೀಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ‘ಅಂತರರಾಷ್ಟ್ರೀಯ ನ್ಯಾಯಾಲಯ (ವಿಮರ್ಶೆ ಮತ್ತು ಮರುಪರಿಶೀಲನೆ) ಸುಗ್ರೀವಾಜ್ಞೆ‘ ಎಂಬ ಶೀರ್ಷಿಕೆಯ ಕರಡು ಮಸೂದೆಯನ್ನು ಬುಧವಾರ ಕಾನೂನು ಮತ್ತು ನ್ಯಾಯಾಂಗ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯಿ ಸಮಿತಿ ಅಂಗೀಕರಿಸಿತು.

ಚರ್ಚೆಯಲ್ಲಿ ಭಾಗವಹಿಸಿದ ಫೆಡರಲ್ ಕಾನೂನು ಮತ್ತು ನ್ಯಾಯಾಂಗ ಸಚಿವ ಫರೋಗ್ ನಸೀಮ್, ‘ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನಿರ್ದೇಶನಗಳಿಗೆ ಅನುಸಾರವಾಗಿ ಮಸೂದೆಯನ್ನು ಮಂಡಿಸಲಾಗಿದೆ‘ ಎಂದು ಹೇಳಿದರು.

ADVERTISEMENT

ಸಂಸತ್ತುಮಸೂದೆ ಅಂಗೀಕರಿಸದಿದ್ದಲ್ಲಿ ಐಸಿಜೆ ತೀರ್ಪನ್ನು ಪಾಲಿಸದ ಕಾರಣ ಪಾಕಿಸ್ತಾನವು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಐವತ್ತು ವರ್ಷದ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್‌ಗೆ 2017ರ ಏಪ್ರಿಲ್‌ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು.

2017ರಲ್ಲಿ, ಜಾಧವ್ ಅವರಿಗೆ ಕಾನ್ಸುಲ್‌ ಭೇಟಿಗೆ ಪಾಕಿಸ್ತಾನ ಅವಕಾಶ ನಿರಾಕರಿಸಿದ ಕಾರಣ, ಭಾರತ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.