ಕರಾಚಿ: ಪಾಕಿಸ್ತಾನದ ವ್ಯಕ್ತಿಯೊಬ್ಬರು ಲಾಹೋರ್‌ನಿಂದ ಕರಾಚಿಗೆ ಹೊರಟವರು ವಿಮಾನಯಾನ ಸಂಸ್ಥೆಯ ಎಡವಟ್ಟಿನಿಂದ ಸೌದಿ ಅರೇಬಿಯಾಕ್ಕೆ ತಲುಪಿದ್ದಾರೆ.
ಜುಲೈ 7ರಂದು ತನ್ನ ಮಗನಿಗೆ ಅನಾರೋಗ್ಯವಿರುವುದು ತಿಳಿದು ಏರ್‌ಸಿಯಾಲ್ ವಿಮಾನದಲ್ಲಿ ಕರಾಚಿಗೆ ಹೊರಟಿದ್ದ ಮಲಿಕ್ ಶಹಝೈನ್ ಎನ್ನುವ ವ್ಯಕ್ತಿಯು ವಿಮಾನಯಾನ ಸಂಸ್ಥೆಯ ಎಡವಟ್ಟಿನಿಂದ ಸೌದಿ ತಲುಪಿದ್ದಾರೆ. ಆದರೆ, ಅವರ ವಸ್ತುಗಳು ಕರಾಚಿಗೆ ತಲುಪಿವೆ.
‘ವಿಮಾನ ನಿಲ್ದಾಣದಲ್ಲಿ ಎರಡು ಏರ್‌ಸಿಯಾಲ್ ವಿಮಾನಗಳಿದ್ದವು, ಅದರಲ್ಲಿ ಒಂದು ಕರಾಚಿ ಹಾಗೂ ಇನ್ನೊಂದು ಜೆಡ್ಡಾಗೆ ತೆರಳಲು ಸಿದ್ದವಾಗಿದ್ದವು. ಆದರೆ, ವಿಮಾನಯಾನ ಸಿಬ್ಬಂದಿಯು ಸರಿಯಾಗಿ ತಪಾಸಣೆ ಮಾಡದೇ ಅಂತರರಾಷ್ಟ್ರೀಯ ವಿಮಾನದಲ್ಲಿ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಎರಡು ಗಂಟೆಗಳ ವಿಮಾನಯಾನದ ನಂತರವೂ ನಿಲ್ದಾಣ ತಲುಪದೇ ಇದ್ದಾಗ, ಎಡವಟ್ಟಿನ ಅರಿವಾಗಿದೆ’ ಎಂದು ಮಲಿಕ್ ಶಹಝೈನ್ ತಿಳಿಸಿದ್ದಾರೆ.
ಜೆಡ್ಡಾ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಮಲಿಕ್ ಶಹಝೈನ್ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ, ಅವರ ತಪ್ಪಿಲ್ಲದಿರುವುದು ಗೊತ್ತಾಗಿದೆ. ನಂತರ, ವಿಮಾನಯಾನ ಸಂಸ್ಥೆಗೆ ಮುಂದಿನ ವಿಮಾನದಲ್ಲಿ ಅವರನ್ನು ಕರಾಚಿಗೆ ಕಳಿಸುವಂತೆ ಸೂಚಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ‘ಪ್ರಯಾಣಿಕರು ತಪ್ಪಾಗಿ ಬೇರೆ ವಿಮಾನದಲ್ಲಿ ಪ್ರಯಾಣಿಸುವುದು ಸಂಭವಿಸುತ್ತದೆ. ಆದರೆ ದೇಶಿಯ ವಿಮಾನಯಾನ ಮಾಡುತ್ತಿದ್ದ ಪ್ರಯಾಣಿಕರೊಬ್ಬರು ಅಂತರರಾಷ್ಟ್ರೀಯ ವಿಮಾನದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲ ಪ್ರಕರಣವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಏರ್‌ಸಿಯಾಲ್ ವಿಮಾನಯಾನ ಸಂಸ್ಥೆಯು ಪಾಕಿಸ್ತಾನದ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.