ADVERTISEMENT

ಜಮ್ಮು–ಕಾಶ್ಮೀರದಲ್ಲಿ ಮಾನವಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಪಾಕ್‌ನಿಂದ ನಿಲುವಳಿ

ಪಿಟಿಐ
Published 14 ಜುಲೈ 2020, 3:23 IST
Last Updated 14 ಜುಲೈ 2020, 3:23 IST
ಶ್ರೀನಗರ – ಎಎಫ್‌ಪಿ ಚಿತ್ರ
ಶ್ರೀನಗರ – ಎಎಫ್‌ಪಿ ಚಿತ್ರ   

ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಪಾಕಿಸ್ತಾನ ಸಂಸತ್‌ನಲ್ಲಿ ಸೋಮವಾರ ನಿಲುವಳಿ ಮಂಡಿಸಲಾಗಿದೆ. ಇದಕ್ಕೆ ಒಮ್ಮತದ ಅನುಮೋದನೆಯೂ ದೊರೆತಿದೆ.

ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಅಲಿ ಮೊಹಮ್ಮದ್ ಖಾನ್ ನಿಲುವಳಿ ಮಂಡಿಸಿದ್ದಾರೆ. ಜೊತೆಗೆ, ಕಾಶ್ಮೀರದ ಜನರಿಗೆ ರಾಜಕೀಯ ಮತ್ತು ರಾಜತಾಂತ್ರಿಕ ಬೆಂಬಲ ನೀಡುವುದಾಗಿಯೂ ಘೋಷಿಸಿದ್ದಾರೆ.

ಕಾಶ್ಮೀರದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯ ತಮ್ಮ ಪಾತ್ರ ನಿಭಾಯಿಸಬೇಕು ಎಂದೂ ಪಾಕಿಸ್ತಾನ ಸಂಸತ್ ಆಗ್ರಹಿಸಿದೆ. ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡುವ ಮೂಲಕ ಕಾಶ್ಮೀರದ ಜನರೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರಿದ್ದಾರೆ.

ADVERTISEMENT

ಪಾಕಿಸ್ತಾನದ ವಿದೇಶಾಂಗ ಇಲಾಖೆಯು ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿದ್ದು, ಕಾಶ್ಮೀರದ ಜನರಿಗೆ ನಮ್ಮ ಬೆಂಬಲ ಮುಂದುವರಿಯಲಿದೆ ಎಂದು ಹೇಳಿದೆ.

ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು (ಸಂವಿಧಾನದ 370ನೇ ವಿಧಿ) ಕಳೆದ ವರ್ಷ ಆಗಸ್ಟ್ 5ರಂದು ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು. ಇದಾದ ಬಳಿಕ ಜಮ್ಮು-ಕಾಶ್ಮೀರ ವಿಚಾರವಾಗಿ ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯಲು ಪಾಕಿಸ್ತಾನ ವಿಫಲ ಯತ್ನ ನಡೆಸುತ್ತಲೇ ಇದೆ.

ಆದರೆ, ಜಮ್ಮು–ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಈಗಾಗಲೇ ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಹೇಳಿದೆ. ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿದ ವಿಚಾರಗಳು ಭಾರತದ ಆಂತರಿಕ ವಿಷಯ ಎಂದೂ ಹೇಳಿದೆ.

ಸಂವಿಧಾನದ 370ನೇ ವಿಧಿ ರದ್ದುಪಡಿಸಿರುವುದು ಆಂತರಿಕ ವಿಚಾರ ಎಂದು ಭಾರತವು ಅಂತರರಾಷ್ಟ್ರೀಯ ಸಮುದಾಯಕ್ಕೂ ತಿಳಿಸಿತ್ತು. ವಾಸ್ತವವನ್ನು ಒಪ್ಪಿಕೊಂಡು ಭಾರತ ವಿರೋಧಿ ಚಟುವಟಿಕೆ ನಡೆಸುವುದನ್ನು ನಿಲ್ಲಿಸಿ ಎಂದು ಪಾಕಿಸ್ತಾನಕ್ಕೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.